ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಯಂತಹ ಮೃತ್ಯು ಕೂಪಕ್ಕೆ ತಳ್ಳಬಾರದು : ನ್ಯಾ. ಕರೆಣ್ಣವರ

ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಯಂತಹ ಮೃತ್ಯು ಕೂಪಕ್ಕೆ ತಳ್ಳಬಾರದು : ನ್ಯಾ. ಕರೆಣ್ಣವರ

ದಾವಣಗೆರೆ,ಆ.11-ಮಕ್ಕಳು, ಮಕ್ಕಳಾಗಿ ಬದುಕಬೇಕಾದರೆ ಅವರಿಗೆ ಅವರದೇ ಆದ ಹಕ್ಕುಗಳನ್ನು ಅನುಭವಿಸಲು ಬಿಡಬೇಕು. ಮಕ್ಕಳ ಹಕ್ಕುಗಳನ್ನು ಮಕ್ಕಳಿಗಿಂತ ಹೆಚ್ಚು ಪೋಷಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕು.ಆಗ ಮಾತ್ರ ನಾವು ಮಕ್ಕಳ ಹಕ್ಕುಗಳಿಗನುಸಾರವಾಗಿ ಅವರೊಂದಿಗೆ ಇರಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ತಿಳಿಸಿದರು.

ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾರ್ಮಿಕ ಇಲಾಖೆ, ದಾವಣಗೆರೆ ಅಜೀಮ್, ಪ್ರೇಮ್‍ಜೀ, ಫಿಲಾಂತ್ರಫಿಕ್ ಇನಿಷಿಯೇಟಿವ್ಸ್, ಆಕ್ಷನ್ ಇನಿಷಿಯೇಟಿವ್ ಫಾರ್ ಡೆವಲಪ್‍ಮೆಂಟ್ ಇವರ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಇಂದಿರಾ ನಗರದ ಶ್ರೀ ಗಲ್ಲಿ ದುರ್ಗಮ್ಮ ದೇವಸ್ಥಾನದಲ್ಲಿ ಮೊನ್ನೆ ಏರ್ಪಡಿಸಲಾಗಿದ್ದ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಹಾಗೂ ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ ನಿಷೇಧ ಕಾಯಿದೆ, ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿಷೇಧ ಕಾಯಿದೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ನಾವು ಬಡತನ, ಅನಕ್ಷರತೆ, ನಿರುದ್ಯೋಗ ಮತ್ತು ಜನಸಂಖ್ಯೆಯ ಕಾರಣ ಹೇಳಿ ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಯಂತಹ ಮೃತ್ಯು ಕೂಪಕ್ಕೆ ತಳ್ಳಬಾರದು. ಅದರಿಂದ ಹೊರತಂದು ಕನಿಷ್ಠ 18 ವರ್ಷಗಳ ತನಕವಾದರೂ ಶಿಕ್ಷಣ ಪಡೆಯುವಂತೆ ಮಾಡಬೇಕು. ಸಾರ್ವತ್ರಿಕ ಶಿಕ್ಷಣ, ಬಾಲ ಕಾರ್ಮಿಕ ಪದ್ಧತಿ ಮತ್ತು ಇತರೆ ಸಮಸ್ಯೆಗಳ ಮುಕ್ತಿಗೆ ಮಕ್ಕಳ ಹಕ್ಕುಗಳನ್ನು ಅರಿತು ಉತ್ತಮ ನಾಗರಿಕರನ್ನಾಗಿ ತಯಾರು ಮಾಡಲು ನಾವೆಲ್ಲರೂ ಶ್ರಮಿಸಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ ಕುಮಾರ್ ಮಾತನಾಡಿ, ಮಕ್ಕಳಿಗಾಗಿ ಅವರದೇ  ಆದ ಹಕ್ಕುಗಳನ್ನು ನೀಡಬೇಕೆಂದು ವಿಶ್ವಸಂಸ್ಥೆ ಸಮಾವೇಶ ನಡೆಸಿ 1989ರಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಗೆ ತಂದಿದೆ. ಭಾರತ ಸರ್ಕಾರವು ಕೂಡ ಒಡಂಬಡಿಕೆಗೆ ಸಹಿ ಮಾಡಿದೆ. ಪ್ರಪಂಚದಲ್ಲಿ ಯೇ ಮಕ್ಕಳ ಹಕ್ಕುಗಳ ಒಡಂಬಡಿಕೆ ಅತ್ಯಂತ ಹೆಚ್ಚಿನ ರಾಷ್ಟ್ರಗಳು ಸಹಿ ಮಾಡಿರುವ ಏಕೈಕ ಒಡಂಬಡಿಕೆ ಯಾಗಿದ್ದು, ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅವಕಾಶ, ವಿಕಾಸ ಹೊಂದುವ ಹಕ್ಕು, ಭಾಗ ವಹಿಸುವ ಹಕ್ಕುಗಳನ್ನು ಈ ಒಡಂಬಡಿಕೆ ಅಡಿಯಲ್ಲಿ ಮಕ್ಕಳಿಗೆ ನೀಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಐಡಿ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ಬಾಬಣ್ಣ ಮಾತನಾಡಿ, ಭಾರತ ಸಂವಿಧಾನದ 21ರ ಪ್ರಕಾರ ಎಲ್ಲರಿಗೂ ಬದುಕುವ ಹಕ್ಕು ಇದ್ದು, 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕು ಎಂದು ದೃಢಪಡಿಸಲಾಗಿದೆ. ಸಂವಿಧಾನದ ಅಡಿಯಲ್ಲಿ ಅನೇಕ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ 1ನೇ ವೃತ್ತ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕ ರಾಜಶೇಖರ್ ಹಿರೇಮಠ, ಶಿಕ್ಷಕಿ ತಾರಮ್ಮ, ಬಂಕಾಪುರ ನಂಜುಂ ಡಪ್ಪ ಸ.ಹಿ.ಪ್ರಾ. ಶಾಲೆಯ ಶಿಕ್ಷಕ ಪರಮೇಶ್ವರಪ್ಪ ಮತ್ತು ಇತರರು ಭಾಗವಹಿಸಿದ್ದರು.

error: Content is protected !!