‘ಇ-ಸ್ವತ್ತಿ’ಗೆ ಅಲೆದಾಡಿಸಬೇಡಿ : ಅಧಿಕಾರಿಗಳಿಗೆ ತಾಕೀತು

‘ಇ-ಸ್ವತ್ತಿ’ಗೆ ಅಲೆದಾಡಿಸಬೇಡಿ : ಅಧಿಕಾರಿಗಳಿಗೆ ತಾಕೀತು

ನರಗನಹಳ್ಳಿ ಗ್ರಾಮ ಪಂಚಾಯಿತಿಗೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ

ದಾವಣಗೆರೆ, ಆ. 7 – ಗ್ರಾಮೀಣ ಜನರ ಸಮಸ್ಯೆಗಳಿಗೆ ಪರಿಹಾರ ಹಾಗೂ ಗ್ರಾಮಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿರುವುದು ಗ್ರಾ.ಪಂ. ಆಡಳಿತ ಮತ್ತು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಾಯಕೊಂಡ ಕ್ಷೇತ್ರ ವ್ಯಾಪ್ಯಿಯ ನಗರನಹಳ್ಳಿ ಗ್ರಾಮ ಪಂಚಾಯತಿ ಕಚೇರಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇ-ಸ್ವತ್ತು ಮಾಡಿಕೊಡಲು ಕಚೇರಿಗೆ ಅಲೆದಾಡಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಯಾವುದೇ ಕಾರಣಕ್ಕೂ ಅಲೆದಾಡಿಸುವ ಕೆಲಸ ಮಾಡಬಾರದು. ಅವರು ಅರ್ಜಿ ಸಲ್ಲಿಸಿ ನೀವು ನಿಗದಿಪಡಿಸಿದ ದಿನಗಳೊಳಗೆ ಅರ್ಜಿ ವಿಲೇವಾರಿ ಮಾಡಿ ಇ-ಸ್ವತ್ತು ಮಾಡಿಕೊಡಬೇಕೆಂದು ತಾಕೀತು ಮಾಡಿದರು. 

ಉದ್ಯೋಗ ಖಾತ್ರಿಯಡಿ ಕೈಗೊಂಡ ಯಾವುದೇ ಕಾಮಗಾರಿಗಳು ವಿಳಂಬ ಮಾಡಬಾರದು. ಕೈಗತ್ತಿಕೊಂಡ ಕಾಮಗಾರಿಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಬೇಕು. ರೈತರನ್ನು ಅಲೆದಾಡಿಸುವುದು ನನ್ನ ಗಮನಕ್ಕೆ ಬಂದರೆ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮೇಲಾಧಿ ಕಾರಿಗಳಿಗೆ ಸೂಚಿಸುವುದಾಗಿ ಎಚ್ಚರಿಕೆ ನೀಡಿದರು.

ಗ್ರಾಮಗಳಲ್ಲಿ ಸ್ವಚ್ಛತೆ ಇಲ್ಲದ ಪರಿಣಾಮ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿರುವ ಚರಂಡಿಗಳನ್ನು ಸ್ವಚ್ಛತೆಗೊಳಿಸಬೇಕು. ಸಂಜೆ ವೇಳೆ ಸೊಳ್ಳೆಗಳ ನಿರ್ಮೂನೆಗೆ ಫಾಂಗಿಂಗ್ ಮಾಡಬೇಕು.ಜೊತೆಗೆ ಗ್ರಾಮಗಳ ಸ್ವಚ್ಛತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಗ್ರಾಮ ಪಂಚಾಯತಿ ಪಿಡಿಒಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಒ ಹೇಮಂತ್‍ರಾಜ್, ಗುಮ್ಮನೂರು ಶಂಭಣ್ಣ, ಮೈಲಪ್ಪ, ರುದ್ರೇಶ್, ಜಯ್ಯಪ್ಪ,ಅಣ್ಣೇಶ್, ಮಾರುತಿ, ದೇವೇಂದ್ರಪ್ಪ, ನಸರುಲ್ಲ, ಶಿವಣ್ಞ, ಕರಿಬಸಪ್ಪ, ಬಸಣ್ಣ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.

error: Content is protected !!