ವಿಕಲಚೇತನರು ಕೀಳರಿಮೆ ತೊರೆದು ಸಾಧನೆ ಮಾಡಬೇಕು

ವಿಕಲಚೇತನರು ಕೀಳರಿಮೆ ತೊರೆದು ಸಾಧನೆ ಮಾಡಬೇಕು

ಜಗಳೂರಿನ ಕಾರ್ಯಕ್ರಮದಲ್ಲಿ ಶಾಸಕ ದೇವೇಂದ್ರಪ್ಪ ಕರೆ

ಜಗಳೂರು, ಆ. 7 –  ವಿಕಲಚೇತನರು ಕೀಳರಿಮೆ ತೊರೆದು ಆಸಕ್ತಿದಾಯಕ‌ ಕ್ಷೇತ್ರದಲ್ಲಿ  ಉತ್ತಮ ಸಾಧನೆ ಮಾಡಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಇಲ್ಲಿನ ಗುರುಭವನದಲ್ಲಿ ವಿಕಲಚೇತನರ ಅಭಿವೃದ್ದಿ ಸಂಘದ ವಾರ್ಷಿಕೋತ್ಸವ ಹಾಗೂ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಪ್ರತಿಯೊಬ್ಬರ ವಿಕಲಚೇತನರ ಕಾಳಜಿ ವಹಿಸಬೇಕು.  ಅವರ ಭಾವನೆಗಳಿಗೆ ಸ್ಪಂದಿಸಿ ಸಹಾಯಸ್ತ ಚಾಚಬೇಕು ಎಂದು  ಕಿವಿಮಾತು ಹೇಳಿದರು.

ಹುಟ್ಟುತ್ತಲೇ ಅಂಧರಾಗಿದ್ದ ಪಂಡಿತ ಗಾನಗಂ ಧರ್ವ ಪುಟ್ಟರಾಜ ಗವಾಯಿಯವರು  ಸಾಧನೆಗೆ ಅಂಗವೈಕಲ್ಯತೆ ಅಡ್ಡಿಯಲ್ಲ ಎಂಬುದನ್ನು ಸಾಧಿಸಿ ತೋರಿಸಿ ಸಮಾಜಕ್ಕೆ ಸ್ಫೂರ್ತಿಯಾಗಿದ್ದರು ಎಂದರು. 

ತಾಲ್ಲೂಕಿನ ವಿಕಲಚೇತನರ ಶ್ರೇಯೋ ಭಿವೃದ್ದಿಗೆ ಸದಾ ಬದ್ದನಾಗಿರುವೆ ಎಂದು ಭರವಸೆ ನೀಡಿದ ಅವರು, ಗ್ರಾಮೀಣ ಭಾಗದಲ್ಲಿ  ಆಶಾ, ಅಂಗನವಾಡಿ ಕಾರ್ಯಕರ್ತೆಯರು ವಿಕಲಚೇತನರನ್ನು ಗುರುತಿಸಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು. ಜೊತೆಗೆ ನಾನು ವೈಯಕ್ತಿಕವಾಗಿ ಸಹಾಯಧನ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ್ ಸಂತೋಷ್ ಮಾತನಾಡಿ, ವಿಕಲ ಚೇತನರನ್ನು ಸರಪಳಿಯಿಂದ ಬಂಧನದಲ್ಲಿಡುವ, ಪೋಷಕರೇ ಹತ್ಯೆಗೈಯುವ, ಅನಿಷ್ಠ ಪದ್ದತಿ ಸಮಾಜದಲ್ಲಿ ಜೀವಂತವಾಗಿತ್ತು. ದೇಶದಲ್ಲಿ 2016 ರ‌ಲ್ಲಿ ಜಾರಿಗೊಂಡ ವಿಕಲಚೇತನರ ಕಾಯ್ದೆ ಜಾರಿಯಾದ ನಂತರ ಕ್ರಮೇಣವಾಗಿ ವಿಕಲಚೇತನರ ರಕ್ಷಣೆ ಮತ್ತು ಹಕ್ಕುಗಳು, ಸರ್ಕಾರಿ  ಸೌಲಭ್ಯಗಳು ಸಿಗುತ್ತಿವೆ.ನನ್ನ ಪುತ್ರನೂ ಕೂಡ ವಿಕಲಚೇತನನಾಗಿ ಜನಿಸಿದ್ದು, ಅವನನ್ನು ತಾತ್ಸರ ಮಾಡದೆ ಗೌರವದಿಂದ ಪೋಷಣೆ, ಪಾಲನೆ ಮಾಡುತ್ತಾ ದೈವ ಸ್ವರೂಪವಾಗಿ ಕಾಣುತ್ತಿದ್ದೇವೆ ಎಂದು ಭಾವುಕರಾದರು.

ವಿಕಲಚೇತನರ ಅಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ಮಾತನಾಡಿ, ತಾಲ್ಲೂಕಿನಲ್ಲಿ ವಿಕಲಚೇತನರ ಸಮಸ್ಯೆಗಳನ್ನು ಅರಿತು ವಿಕಲಚೇತನರ ಅಭಿವೃದ್ದಿ ಸಂಘ ಸ್ಥಾಪಿಸಿ ವಿಕಲಚೇತನರ ಹಕ್ಕುಗಳು ಮತ್ತು ಸೌಲಭ್ಯಗಳ ಸೇವೆಗಾಗಿ ಕೆಲಸ ಮಾಡಿರುವೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿಕಲ ಚೇತನರಿಗೆ ಜಾಗೃತಿಕಾರ್ಯಕ್ರಮ, ಸಾಧನ ಸಲಕರಣೆ ವಿತರಣೆ, ರಾಂಪ್ ವ್ಯವಸ್ಥೆ. ಯುಡಿಐಡಿ ಕಾರ್ಡ್ ಗಳನ್ನು ಸ್ಥಳೀಯವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ  ಶಾಸಕ ಬಿ.ದೇವೇಂದ್ರಪ್ಪ ಅವರಿಗೆ `ರೈತಮಿತ್ರ, `ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಅವರಿಗೆ `ಯುವರತ್ನ’, ಆರೈಕೆ ಆಸ್ಪತ್ರೆಯ ಡಾ.ರವಿಕುಮಾರ್ ಅವರಿಗೆ `ಆರೋಗ್ಯಮಿತ್ರ’, ಸಮಾಜ ಕಲ್ಯಾಣ ಇಲಾಖೆ‌ ನಿವೃತ್ತ ಸಹಾಯಕ‌ ನಿರ್ದೇಶಕ ಬಿ.ಮಹೇಶ್ವರಪ್ಪ ಅವರಿಗೆ `ಸಮಾಜರತ್ನ’, ಸಂಪಾದಕ ಸಿ.ತಿಪ್ಪೇಸ್ವಾಮಿ ಅವರಿಗೆ `ಪತ್ರಿಕಾ ಸೇವಾ ರತ್ನ‌‌’  ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಹಶಿಲ್ದಾರ್ ಕಲೀಮ್ಉಲ್ಲಾ, ಪ.ಪಂ ಸದಸ್ಯ  ಆರ್. ತಿಪ್ಪೇಸ್ವಾಮಿ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಬಿಇಓ ಹಾಲಮೂರ್ತಿ, ಗ್ರಾ.ಪಂ. ಅಧ್ಯಕ್ಷರಾದ ಅಶ್ವಿನಿ ಅಂಜಿನಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ವೇತಾ, ನಮ್ಮ ಕರ್ನಾಟಕ ಸೇನೆಯ ಜಯಲಕ್ಷ್ಮಿ, ಸುಜಾತ, ಮಂಜುಳಾ, ಸತೀಶ್, ತಿಪ್ಪೇಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!