ಹರಪನಹಳ್ಳಿ : ಕೃಷಿ ಪರಿಕರ ವಿತರಣೆ ಸಭೆಯಲ್ಲಿ ಶಾಸಕರಾದ ಎಂ.ಪಿ ಲತಾ
ಹರಪನಹಳ್ಳಿ,ಆ.6- ಪೌಷ್ಠಿಕ ಆಹಾರ ಬೆಳೆಯಲು ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯಿಂದ ತಾಲೂಕಿನಾದ್ಯಂತ ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಶಾಸಕರಾದ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.
ತಾಲ್ಲೂಕಿನ ಕಾನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯವರು 2024-25ನೇ ಸಾಲಿನಲ್ಲಿ ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆ ಅಡಿ ಕೃಷಿ ಪರಿಕರಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಳೇ ಪದ್ದತಿಯನ್ನು ಹೊಸ ತಾಂತ್ರಿಕತೆಯಲ್ಲಿ ಅಳವಡಿಸಿಕೊಂಡು, ಹೆಚ್ಚಿನ ಇಳುವರಿ ಪಡೆದು, ಆರ್ಥಿಕವಾಗಿ ಸದೃಢವಾಗಿರಿ, ರಾಸಾಯನಿಕ ಗೊಬ್ಬರ ಕಡಿಮೆ ಮಾಡಿ, ಸಾವಯವ ಗೊಬ್ಬರವನ್ನು ಹೆಚ್ಚು ಬಳಸುವಂತೆ ಅವರು ರೈತರಿಗೆ ಸಲಹೆ ನೀಡಿದರು.
ಸಹಾಯಕ ಕೃಷಿ ನಿರ್ದೆಶಕ ವಿ.ಸಿ ಉಮೇಶ್ ಮಾತನಾಡಿ, ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ಇಂದು ಆಹಾರವನ್ನು ಉತ್ಪಾದನೆ ಮಾಡಬೇಕಿದೆ, ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಯಾದರೂ ಅಪೌಷ್ಟಿಕತೆಯಿಂದ ಇಂದು ಅನೇಕರು ಬಳಲುತ್ತಿದ್ದಾರೆ. ಕೃಷಿ ಇಲಾಖೆಯಿಂದ ಕೊಡುವ ವಿವಿಧ ಪರಿಕರಗಳನ್ನು ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯಿರಿ ಎಂದು ತಿಳಿಸಿದರು.
ಮಾಡ್ಲಗೇರಿ ಗ್ರಾ.ಪಂ ಅಧ್ಯಕ್ಷೆ ಹೊಮಾಲಿಬಾಯಿ ಅಧ್ಯಕ್ಷತೆ ವಹಿಸಿದ್ದರು. ಹೊಸಪೇಟೆ ಉಪಕೃಷಿ ನಿರ್ದೇಶಕ ನಯೀಮ್ ಪಾಷ, ಗ್ರಾ.ಪಂ ಉಪಾಧ್ಯಕ್ಷೆ ಪಕ್ಕೀರವ್ವ, ಸದಸ್ಯರಾದ ಎಂ.ನಿರ್ಮಲ, ಕೊಳಚಿ ನಾಗರಾಜ, ಎಚ್.ಉಚ್ಚೆಂಗೆಪ್ಪ, ಮುಖಂಡರಾದ ಪಿ.ರುದ್ರಪ್ಪ, ಪರಮೇಶ್ವರಪ್ಪ, ರಾಮಕೃಷ್ಣ, ಮುನ್ನಾ ಸಾಬ್, ಕೃಷಿ ಅಧಿಕಾರಿ ನಾಗರಾಜ ಸಕ್ರಿಗೌಡರು, ಡಾ.ಎನ್.ಎಚ್ ಸುನೀತಾ, ಗ್ರಾ.ಪಂ ಪಿಡಿಒ ಆನಂದನಾಯ್ಕ ಉಪಸ್ಥಿತರಿದ್ದರು.
ಗ್ರಾಮಸ್ಥರ ಮನವಿ: ಕಾನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯುವಂತೆ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈಗಾಗಲೇ ನಿಮ್ಮ ಊರಿನ ದೊಡ್ಡ ಕೆರೆಗೆ ನೀರು ಹರಿಸಲು 50 ಕೆರೆ ಯೋಜನೆಯಡಿ ಯಲ್ಲಿ ಸೇರಿದೆ. ಚಿಕ್ಕ ಕೆರೆಗೆ ನೀರು ಹರಿಸಲು ಅಗಲ್ಲ ಎಂದ ಅವರು ಚರಂಡಿ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪಡಿಸುವಂತೆ ಪಿಡಿಒಗೆ ಸೂಚಿಸಿದರು.