ದಾವಣಗೆರೆ, ಆ.6- ಸಂಖ್ಯಾ ಶಾಸ್ತ್ರಕ್ಕೆ ಅಡಿಪಾಯ ಹಾಕಿದ ಮಹಾನ್ ವ್ಯಕ್ತಿಯೇ ಪ್ರೊ.ಪಿ.ಸಿ ಮಹಾಲ್‌ನೋಬಿಸ್ ಎಂದು ಜಿ.ಪಂ. ಉಪ ಕಾರ್ಯದರ್ಶಿ ಕೃಷ್ಣನಾಯ್ಕ್ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಪಿ.ಸಿ. ಮಹಾಲ್‌ನೋಬಿಸ್ ದಿನಾಚರಣೆ ಅಂಗ ವಾಗಿ ಹಮ್ಮಿಕೊಂಡಿದ್ದ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾಲ್‌ನೋಬಿಸ್‌ರವರು ದೇಶಕ್ಕೆ ನೀಡಿದ ಕೊಡುಗೆ ಶ್ಲ್ಯಾಘನೀಯವಾಗಿದೆ. ಅಂಕಿ-ಅಂಶಗಳ ಮೂಲಕ ಸಮೀಕ್ಷೆ ಮಾಡುವುದನ್ನು ಅವರು ತೋರಿಸಿ ಕೊಟ್ಟಿದ್ದು, ಮಾದರಿ ಸಮೀಕ್ಷೆ ಅವರ ಅನನ್ಯ ಕೊಡುಗೆ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಅಂಕಿ-ಅಂಶಗಳ ಸಮೀಕ್ಷೆಗಳು ಸಹಕಾರಿಯಾಗಿವೆ ಎಂದರು.
ಸರ್ಕಾರಿ ಯೋಜನೆಗಳನ್ನು ರೂಪಿಸುವಲ್ಲಿ ಅಂಕಿ-ಸಂಖ್ಯೆಗಳ ಪಾತ್ರ ಮುಖ್ಯವಾಗಿದೆ. ಮತ್ತು ನಂಬಲಾರ್ಹ ಅಂಕಿ-ಅಂಶಗಳನ್ನು ಕಾಲಮಿತಿ ಒಳಗೆ ಸಂಗ್ರಹಿಸಿ ವಿಶ್ಲೇಷಣಾ ವರದಿಯನ್ನು ಪ್ರಕಟಿಸುವಲ್ಲಿ ಸಾಂಖ್ಯಿಕ ಇಲಾಖೆಯ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಮಹಾಲ್‌ನೋಬಿಸ್ ಭಾರತೀಯ ಸಂಖ್ಯಾ ಶಾಸ್ತ್ರೀಯ ಸಂಸ್ಥೆಯನ್ನು ಸ್ಥಾಪಿಸಿ ದೇಶದ ಆರ್ಥಿಕ ಯೋಜನೆ ಮತ್ತು ಅಂಕಿ-ಅಂಶಗಳ ಅಭಿವೃದ್ಧಿ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಸ್ಮರಿಸಿದರು.
ಜಿ.ಪಂ. ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ ಮಾತನಾಡಿ, ಸಂಖ್ಯಾ ಶಾಸ್ತ್ರಜ್ಞ ಪಿ.ಸಿ.ಮಹಾಲ್‌ನೋಬಿಸ್ ಜಯಂತಿಯನ್ನು ಸಾಂಖ್ಯಿಕ ದಿನವನ್ನಾಗಿ ಆಚರಿಸುತ್ತಿರುವುದು ಅರ್ಥ ಪೂರ್ಣವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಾಂಖ್ಯಿಕ ಇಲಾಖೆ ಕೈಗೊಳ್ಳುವ ಜನನ-ಮರಣ ನೋಂದಣಿ, ಕೃಷಿ ಅಂಕಿ-ಅಂಶಗಳು, ಬೆಳೆ ಅಂದಾಜು ಸಮೀಕ್ಷೆ, ಧಾರಣೆ ವರದಿ, ರಾಷ್ಟ್ರೀಯ ಮಾದರಿ ಸಮೀಕ್ಷೆ ಮತ್ತು ಜಿಲ್ಲಾ ಅಂಕಿ-ಅಂಶ ನೋಟದ ಪ್ರಕಟಣೆ ಹಾಗೂ ಮುಂತಾದ ಕಾರ್ಯಗಳು ಅಭಿವೃದ್ಧಿ ಗಣನೆಯಲ್ಲಿ ಮಹತ್ವದ್ದಾಗಿವೆ ಎಂದು ತಿಳಿಸಿದರು.
ಜಿ.ಪಂ ಉಪ ನಿರ್ದೇಶಕಿ ಶಾರದಾ ದೊಡ್ಡಗೌಡ್ರು, ಸಾಂಖ್ಯಿಕ ಅಧಿಕಾರಿ ನೀಲಾ, ಕೌಶಲ್ಯ ಅಭಿವೃದ್ಧಿ ಸಹಾಯಕ ನಿರ್ದೇಶಕ ಡಾ. ಸಿದ್ದೇಶ್, ಇ.ಒ. ರಾಮ ಭೋವಿ, ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.