ದಾವಣಗೆರೆ, ಆ. 6 – ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಶೋಷಿತರು, ದಮನಿತರು, ಸಮಾಜದ ಕೆಳಸ್ತರದಲ್ಲಿರುವವರು ನ್ಯಾಯ ವಿತರಣೆಯಿಂದ ವಂಚಿತರಾಗಿದ್ದು, ಅವರಿಗೆ ಸೂಕ್ತ ಸಮಯದಲ್ಲಿ ನ್ಯಾಯ ವಿತರಣೆ ಮಾಡುವಲ್ಲಿ ವಕೀಲರ ಪಾತ್ರ ಪ್ರಮುಖವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.
ಜಿಲ್ಲಾ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಜುಲೈನಲ್ಲಿ ನಡೆದ ಲೋಕ್‍ಅದಾಲತ್‍ನಲ್ಲಿ ಅತೀ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಕ್ಕಾಗಿ ಏರ್ಪಡಿಸಲಾಗಿದ್ದ ವಕೀಲರಿಗೆ ಅಭಿನಂದನಾ ಸಮಾರಂಭ ಹಾಗೂ ಸೆಪ್ಟಂಬರ್‍ನಲ್ಲಿ ನಡೆಯಲಿರುವ ಲೋಕ್‍ಅದಾಲತ್ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಹೈಕೋರ್ಟ್ ಜಿಲ್ಲಾ ವಕೀಲರ ಸಂಘಕ್ಕೆ ಪ್ರಶಂಸಾ ಪತ್ರ ನೀಡಿ ಮಾತನಾಡಿದರು.
ಭಾರತದಲ್ಲಿ ಧರ್ಮ, ವರ್ಗ, ಜಾತಿ, ಲಿಂಗ ಹಾಗೂ ಲಿಂಗಭೇದವನ್ನು ಮೀರಿ ಜನತಾ ನ್ಯಾಯಾಲಯಗಳನ್ನು ನ್ಯಾಯ ದೇಗುಲಗಳೆಂದು ಭಾವಿಸಿದ್ದರೆ. ಅವರ ನಂಬಿಕೆಯನ್ನು ಉಳಿಸಲು ಅತ್ಯಂತ ಪರಿಣಾಮಕಾರಿಯಾಗಿ ನ್ಯಾಯಾಲಯ ಗಳು ವಕೀಲರ ಸಹಕಾರದೊಂದಿಗೆ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ ಅವರು ಮಾತನಾಡಿ, ಹಸಿದವರಿಗೆ ಅನ್ನ, ಕಷ್ಟದಲ್ಲಿರುವವರಿಗೆ ಸಹಾಯ, ತಪ್ಪು ಮಾಡಿದವರನ್ನು ಸರಿದಾರಿಗೆ ತರುವ ಮೂಲಕ ಸೋಲಿನಲ್ಲೂ ಧೈರ್ಯ, ಉತ್ಸಾಹ ತುಂಬುವ ಮೂಲಕ, ಕಕ್ಷಿದಾರರಿಗೆ ತಾಯಿ ಬೇರುಗಳಾಗಿ ವಕೀಲರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು. ಕಳೆದ ಲೋಕ್‍ಅದಾಲತ್‍ನಲ್ಲಿ 25 ಕುಟುಂಬಗಳನ್ನು ಒಂದು ಮಾಡುವ ಮೂಲಕ ಕೌಟುಂಬಿಕ ನ್ಯಾಯಾಲಯ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್ ಮಾತನಾಡಿ, ಭಾರತದಲ್ಲಿ ನ್ಯಾಯಾಂಗವು ಇಂದಿಗೂ ಜನತೆಯ ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಂಡಿದ್ದು ಆ ನಿಟ್ಟಿನಲ್ಲಿ ನ್ಯಾಯಾಂಗದ ಭಾಗವಾಗಿರುವ ನ್ಯಾಯಾಧೀ ಶರು, ವಕೀಲರು ಮತ್ತು ನ್ಯಾಯಾಂಗ ಸಿಬ್ಬಂದಿ ಹೆಚ್ಚು ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ. ಲೋಕ್ ಅದಾಲತ್‍ನಲ್ಲಿ ವಕೀಲರ ಸಹಕಾರದಿಂದ ಅತೀ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು ಕರ್ನಾಟಕ ಹೈಕೋರ್ಟ್ ನೀಡಿರುವ ಪ್ರಶಂಸಾ ಪತ್ರ ದಾವಣಗೆರೆ ವಕೀಲರ ಸಮುದಾಯಕ್ಕೆ ಸಂದ ಗೌರವವಾಗಿದೆ ಎಂದು ಪ್ರತಿಪಾದಿಸಿದರು.
ಜಿಲ್ಲಾ ಸೇವಾ ಮತ್ತು ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ್ ಮ. ಕರೆಣ್ಣವರ, ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರವೀಣ್‍ಕುಮಾರ್ ಆರ್.ಎನ್, ಮಕ್ಕಳ ಸ್ನೇಹಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪ್ಪ ಗಂಗಪ್ಪ ಸಲಗರೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ, ನ್ಯಾಯಾಧೀಶರಾದ ಶ್ರೀಮತಿ ರೇಷ್ಮಾ, ಅಮರ್ ವಿ.ಎಲ್., ಸಿ. ನಾಗೇಶ್, ಶ್ರೀಮತಿ ಗಾಯಿತ್ರಿ ಹೆಚ್.ಡಿ., ಮಲ್ಲಿಕಾರ್ಜುನ್, ಸಿದ್ಧರಾಜು, ನಾಜಿಯಾ ಕೌಸರ್ ಉಪಸ್ಥಿತರಿದ್ದರು.
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳ್ ಸ್ವಾಗತಿಸಿದರು, ಕಾರ್ಯದರ್ಶಿ ಎಸ್. ಬಸವರಾಜ್ ನಿರೂಪಿಸಿದರು, ಕಾರ್ಯಕಾರಿ ಸಮಿತಿ ಸದಸ್ಯ ವಾಗೀಶ್ ಕಟಗಿಹಳ್ಳಿ ಮಠ, ಭಾಗ್ಯಲಕ್ಷ್ಮಿ ಆರ್., ಮಧುಸೂದನ್ ಟಿ.ಹೆಚ್., ರಾಘವೇಂದ್ರ ಎಂ., ಸಂತೋಷ್ ಕುಮಾರ್ ಜಿ.ಜೆ., ನಾಗರಾಜ್ ಎಲ್., ಕೆ.ಎಂ. ನೀಲಕಂಠಯ್ಯ, ಬಿ. ಅಜಯ್, ಎಂ. ಚೌಡಪ್ಪ, ಇನ್ನಿತರ ವಕೀಲರು ಪಾಲ್ಗೊಂಡಿದ್ದರು.