ಹರಪನಹಳ್ಳಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ವಿ. ಗಿರೀಶ್ಬಾಬು ಶ್ಲ್ಯಾಘನೆ
ಹರಪನಹಳ್ಳಿ, ಆ.5- ವ್ಯಸನ ಮುಕ್ತ ಸಮಾಜ ನಿರ್ಮಿಸಲು ಮಹಾಂತ ಶಿವಯೋಗಿಗಳು ಪಣ ತೊಟ್ಟಿದ್ದರು ಎಂದು ತಹಶೀಲ್ದಾರ್ ಬಿ.ವಿ. ಗಿರೀಶ್ಬಾಬು ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ಶ್ರೀ ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ತಾಲ್ಲೂಕು ಆಡಳಿತದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜವನ್ನು ದುಶ್ಚಟಗಳಿಂದ ದೂರವಿಡಲು ಮಹಾಂತ ಶ್ರೀಗಳು ಜೋಳಿಗೆ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಹೊಸ ಸಮಾಜ ಕಟ್ಟಲು ಮುಂದಾಗಿದ್ದರು. ಅಲ್ಲದೇ ತಮ್ಮ ಮಠದಲ್ಲಿ ನಿತ್ಯ ದಾಸೋಹ ನಡೆಸುವ ಮೂಲಕ ಮಾದರಿಯಾಗಿದ್ದರು ಎಂದರು.
ಯುವ ಸಮೂಹವು ದುಶ್ಚಟಕ್ಕೆ ಮಾರುಹೊಗದೇ, ಮಹಾಂತ ಶ್ರೀಗಳ ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳುವ ಮೂಲಕ ಸತ್ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಹಾಲಸ್ವಾಮಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಉಪನ್ಯಾಸ ನೀಡಿದರು.
ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಷಣ್ಮುಖಪ್ಪ, ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ್, ವಿವಿಧ ಶಾಲೆಯ ಮಕ್ಕಳು, ಶಿಕ್ಷಕರು ಇದ್ದರು.