ತುಮಕೂರು, ಆ. 5 – ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರನ್ನು ತುಮಕೂರು ವಿಶ್ವವಿದ್ಯಾಲಯವು ಅಧ್ಯಾತ್ಮಿಕ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿದೆ.
ಶ್ರೀಗಳ ಜೊತೆಗೆ, ಕ್ರೀಡೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ತುಮಕೂರು ಜಿಲ್ಲೆಯ ಸುಗ್ಗನ ಪಾಳ್ಯದ ಎಸ್.ಸಿ. ನಾಗಾನಂದ ಸ್ವಾಮಿ ಹಾಗೂ ಸಮಾಜ ಸೇವಾ ವಿಭಾಗದಲ್ಲಿ ಕೈಗಾರಿಕೋದ್ಯಮಿ ಹೆಚ್.ಜಿ. ಚಂದ್ರಶೇಖರ್ ಅವರುಗಳಿಗೂ ಗೌರವ ಡಾಕ್ಟರೇಟ್ ನೀಡಲು ತುಮಕೂರು ವಿ.ವಿ. ನಿರ್ಧರಿಸಿದೆ.
ನಾಡಿದ್ದು ದಿನಾಂಕ 7ರ ಬುಧವಾರ ಬೆಳಿಗ್ಗೆ 11.30ಕ್ಕೆ ತಮಕೂರು ವಿ.ವಿ. ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ತುಮಕೂರು ವಿಶ್ವವಿದ್ಯಾನಿಲಯದ 17ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಇಸ್ರೋ ವಿಶ್ರಾಂತ್ ಅಧ್ಯಕ್ಷ ಡಾ. ಕಿರಣ್ಕುಮಾರ್ ಅವರು ರಾಜನಹಳ್ಳಿ ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆಂದು ತುಮಕೂರು ವಿ.ವಿ. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅವರು ಸೋಮವಾರ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.