ಮಲೇಬೆನ್ನೂರು, ಆ. 5- ಜಿ.ಬೇವಿನಹಳ್ಳಿ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಬೆಂಗಳೂರಿನ ಪವರ್ ಸ್ಕೂಲ್ ಕಂಪನಿ ಹಾಗೂ ಇಂಡಿಯಾ ಸುದಾರ್ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಬಾಲಕಿಯರ ಹೈಟೆಕ್ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಯನ್ನು ಪವರ್ ಸ್ಕೂಲ್ ಕಂಪನಿಯ ಸಿಎಸ್ಆರ್ ಮುಖ್ಯಸ್ಥ ಪ್ರಕಾಶಂ ಅವರು ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಪ್ರಕಾಶಂ ಅವರು, ಮಕ್ಕಳು ಗುರಿ ತಲುಪುವವರೆಗೂ ಶ್ರಮವಹಿಸಿ ಅಧ್ಯಯನ ಮಾಡಬೇಕು. ಜೊತೆಗೆ ತಂದೆ – ತಾಯಿಗಳಿಗೆ, ಓದಿದ ಶಾಲೆಗೆ, ಅಕ್ಷರ ಕಲಿಸಿದ ಗುರುಗಳಿಗೆ ಒಳ್ಳೆಯ ಹೆಸರು ತನ್ನಿ ಎಂದರು.
ಇನ್ನೋರ್ವ ಸಿಎಸ್ಆರ್ ಸದಸ್ಯ ಸೌಂದರ್ಯ ರಾಜನ್ ಮಾತನಾಡಿ, ಕಷ್ಟಪಟ್ಟು ಓದಿದರೆ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉನ್ನತ ಸ್ಥಾನ ಮತ್ತು ಉತ್ತಮ ವೇತನ ಪಡೆಯಬಹುದು ಎಂದು ಹೇಳಿದರು. ತಾ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣ ಕುಮಾರ್ ಹೆಗಡೆ ಮಾತನಾಡಿ, ಈ ವರ್ಷದಲ್ಲಿ ಎರಡು ಶೌಚಾಲಯ ನಿರ್ಮಿಸಿದ ಪವರ್ ಸ್ಕೂಲ್ ಸಂಸ್ಥೆಯ ಮುಖ್ಯಸ್ಥರಾದ ಪ್ರಕಾಶಂ, ಸೌಂದರ್ಯ ರಾಜನ್, ಚೇತನ್ ಕೀರ್ತಿ ಅವರಿಗೆ ಧನ್ಯವಾದಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಉಮೇಶ್, ಇಂಡಿಯಾ ಸುಧಾರ್ ಸಂಸ್ಥೆಯ ಮುಖ್ಯಸ್ಥ ವಿನೋದ್ ಮುರುಗೋಡ್, ಶಾಲೆಯ ಶಿಕ್ಷಕರಾದ ನಾಗರಾಜ್, ರವೀಂದ್ರ, ಎಸ್ಡಿಎಂಸಿ ಪದಾಧಿಕಾರಿಗಳು ಹಾಜರಿದ್ದರು.