ಮಲೇಬೆನ್ನೂರು, ಆ. 5 – ಆಷಾಢ ಮಾಸದ ಕೊನೆ ದಿನ ಮತ್ತು ಭೀಮನ ಹಾಗೂ ನಾಗರ ಪಂಚಮಿ ಅಮಾವಾಸ್ಯೆ ಪ್ರಯುಕ್ತ ಸುಕ್ಷೇತ್ರ ಉಕ್ಕಡಗಾತ್ರಿಗೆ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ದರ್ಶನಕ್ಕೆ ಭಕ್ತರ ಸಮಾಗಮ ಆಯಿತು.
ಅಮಾವಾಸ್ಯೆ ಪ್ರಯುಕ್ತ ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ಸರತಿ ಸಾಲಿನಲ್ಲಿ ಅಜ್ಜಯ್ಯನ ದರ್ಶನ ಪಡೆದರು. ನದಿ ತಟದಲ್ಲಿ ಭಕ್ತರು ತಮ್ಮ ತಮ್ಮ ಹರಕೆ ಅನುಸಾರ ಪೂಜೆ ಸಲ್ಲಿಸಿದರು. ತಲೆಯ ಮೇಲೆ ಕಲ್ಲನ್ನು ಹೊತ್ತು ನನ್ನ ಕಷ್ಟಗಳ ಭಾರ ಇಳಿಸು ಎಂದು ಅಜ್ಜಯ್ಯನಲ್ಲಿ ಸಂಕಲ್ಪ ಮಾಡುವುದು ಸಾಮಾನ್ಯವಾಗಿ ಕಂಡು ಬಂತು. ಹರಕೆ ಹೊತ್ತ ಭಕ್ತರು ಉರುಳು ಸೇವೆ ಸಲ್ಲಿಸಿದರು.
ಅಜ್ಜಯ್ಯನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಜ್ಜಯ್ಯನ ದರ್ಶನದ ನಂತರ ಮಹಿಳೆಯರು ತಮ್ಮ ಗಂಡನ ಪಾದಗಳಿಗೆ ಪೂಜೆ ಸಲ್ಲಿಸಿ, ನಮಸ್ಕರಿಸುವ ಪದ್ಧತಿಯೂ ಅಲ್ಲಿ ಕಂಡು ಬಂತು.
ನದಿಯಲ್ಲಿ ಪ್ರವಾಹ ಕಡಿಮೆ ಆಗಿದ್ದು, ಮಳೆಯೂ ಸಹ ಅಮಾವಾಸ್ಯೆಗೆ ಬಿಡುವು ಕೊಟ್ಟಂತಿತ್ತು. ಅಂಗಡಿ ಮುಂಗಟ್ಟುಗಳಲ್ಲಿ ಹಣ್ಣು, ಕಾಯಿ, ನಿಂಬೆ ಹಣ್ಣುಗಳ ವ್ಯಾಪಾರ ಭರದಿಂದ ನಡೆಯಿತು. ನದಿ ಪ್ರವಾಹದಿಂದ ಕೆಲ ದಿನಗಳ ಕಾಲ ಭಕ್ತರ ಆಗಮನ ವಿರಳವಾಗಿತ್ತು. ಅಮಾವಾಸ್ಯೆ ಪ್ರಯುಕ್ತ ದೇವಸ್ಥಾನದ ಪ್ರಾಂಗಣದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತು. ನದಿ ಬಳಿ ಭಕ್ತರು ತೆರಳದಂತೆ ದೇವಸ್ಥಾನದಿಂದ ಧ್ವನಿ ವರ್ಧಕದ ಮೂಲಕ ಎಚ್ಚರಿಸಲಾಗುತ್ತಿತ್ತು.