ಕಾವ್ಯಕ್ಕೆ ಸ್ಫೂರ್ತಿ ನೀಡುವ ಪ್ರಾಮಾಣಿಕ ಕೆಲಸವಾಗಲಿ

ಕಾವ್ಯಕ್ಕೆ ಸ್ಫೂರ್ತಿ ನೀಡುವ ಪ್ರಾಮಾಣಿಕ ಕೆಲಸವಾಗಲಿ

ಕಲಾಕುಂಚದ ಕಾರ್ಯಕ್ರಮದಲ್ಲಿ ಸಾಹಿತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಡಾ.ಕಬ್ಬಿನಾಲೆ ವಸಂತ ಭಾರಧ್ವಜ

ದಾವಣಗೆರೆ, ಆ.4- ಭವ್ಯ ಇತಿಹಾಸ ಇರುವ ಕನ್ನಡ ಕಾವ್ಯಪರಂಪರೆ ಇಂದು ಸೂಕ್ತ ಮಾರ್ಗದರ್ಶನ ಇಲ್ಲದೆ ಸೊರಗುತ್ತಿದೆ ಎಂದು ಮೈಸೂರಿನ ಸಾಹಿತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಡಾ.ಕಬ್ಬಿನಾಲೆ ವಸಂತ ಭಾರಧ್ವಜ ಕಳವಳ ವ್ಯಕ್ತಪಡಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಅವರು `ಕುಂಚ ಭಾಗ-4 ಕವನ ಸಂಕಲನ’ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಂಕ್ರಮಣದ ಸ್ಥಿತಿಯಲ್ಲಿರುವ ಕನ್ನಡ ಕಾವ್ಯಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಸ್ಫೂರ್ತಿ ನೀಡಿ ಮುನ್ನಡೆಸುವ ಪ್ರಾಮಾಣಿಕ ಕೆಲಸವನ್ನು ವ್ರತದಂತೆ ಮಾಡಬೇಕಿದೆ. ಕವಿಗಳನ್ನು ಕೈ ಹಿಡಿದು ನಡೆಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

ಭಾಷೆ ಹಾಗೂ ಕಾವ್ಯವನ್ನು ಸರ್ಕಾರ ಉಳಿಸುತ್ತದೆ ಎಂಬ ಭರವಸೆ ಇಲ್ಲ. ಸಂಘ-ಸಂಸ್ಥೆಗಳು ಕವಿಗಳಿಗೆ ಮಾರ್ಗದರ್ಶನ ನೀಡುವ, ನಿರ್ದೇಶಿಸುವಂತಹ ಕಮ್ಮಟ, ಕಾರ್ಯಗಳನ್ನು ಹೆಚ್ಚು ಹೆಚ್ಚಾಗಿ ಏರ್ಪಡಿಸಬೇಕು. ಇಂದಿನ ಕವನ ಸಂಕಲನ ಬಿಡುಗಡೆಯಂತಹ ಕಾರ್ಯಕ್ರಮಗಳು ಅಲ್ಲಲ್ಲಿ ಭರವಸೆಯ ಬೆಳಕಿನ ಕಿರಣಗಳನ್ನು ಸೂಸುತ್ತಿವೆ ಎನ್ನುವುದು ಸಮಾಧಾನದ ಸಂಗತಿ ಎಂದರು.

ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಕ್ರೌರ್ಯ, ದ್ವೇಷ, ಮತ್ಸರ ಹೆಚ್ಚಾಗಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಕವಿಗಳು ಪ್ರಯತ್ನಿಸಬೇಕು. ಅದಕ್ಕಾಗಿ ಕವಿಗಳ ಹೃದಯ ಪ್ರೀತಿಯಿಂದ  ತುಂಬಿರಬೇಕು ಎಂದರು.

ಶುದ್ಧ ವ್ಯಕ್ತಿಗಳ್ನು ನಿರ್ಮಿಸುವಲ್ಲಿ ಪೋಷಕರು  ಸೋತಿದ್ದಾರೆ. ಇದರಿಂದಾಗಿಯೇ ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಕಾವ್ಯಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದಿ ಹೊಸ ಸಮುದಾಯ ಸೃಷ್ಟಿಸುವತ್ತ ಆಲೋಚಿಸಬೇಕು. ಒಂದು ಕಾವ್ಯದ ಸಾಲು ನಮ್ಮ ಕಣ್ಣು ತೆರೆಸುವಂತಿರಬೇಕು. ಆಗ ಮಾತ್ರ ಅದು ಸಾರ್ಥಕ್ಯ ಪಡೆಯುತ್ತದೆ ಎಂದರು.

ಕವಿಗಳಿಗೆ ಸೂಕ್ಷ್ಮಾವಲೋಕನ ಅಗತ್ಯ. ಕೇವಲ ಸೂರ್ಯೋದಯ, ಸೂರ್ಯಾಸ್ತ, ಗಿಡ, ಮರ, ಪ್ರಕೃತಿ ವೀಕ್ಷಣೆ ಅಷ್ಟೇ ಅಲ್ಲ. ಜನರು ಹೇಗೆ ವರ್ತಿಸುತ್ತಾರೆ ಎಂಬನ್ನು ಗಮನಿಸುವುದೂ ಮುಖ್ಯವಾಗುತ್ತದೆ. ಮೌನದಲ್ಲಿ ಸೂಕ್ಷ್ಮವಾಗಿ ಅವಲೋಕಿಸುವುದು ಕವಿಯ ಆದ್ಯತೆ ಎಂದು ತಿಳಿಸಿದರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿಯ ಭಾವ ಸಂಗಮ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕ ರಾಜೇಂದ್ರ ಪಾಟೀಲ್, ರಾಯಚೂರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಸಂಸ್ಥಾಪಕ ಗಿರಿಜಾ ಮಾಲಿ ಪಾಟೀಲ್  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.  ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ ಉಪಸ್ಥಿತರಿದ್ದರು.

ಲಲಿತಾ ಕಲ್ಲೇಶ್ ಪ್ರಾರ್ಥಿಸಿದರು. ಶ್ರೀಮತಿ ಚಂದ್ರಶೇಖರ್ ಅಡಿಗ ಸ್ವಾಗತಿಸಿದರು. ಶೈಲಾ ವಿನೋದ್ ರಾಜ್ ಅತಿಥಿಗಳನ್ನು ಸ್ವಾಗತಿಸಿದರು.

error: Content is protected !!