ದಾವಣಗೆರೆ, ಆ.4- ವಚನಗಳ ತಾಳೆ ಗರಿಗಳನ್ನು ಸಂಶೋಧನೆಯಲ್ಲಿ ತೊಡಗಿಸಿ ಕೊಂಡು ಅವುಗಳನ್ನು ಒಗ್ಗೂಡಿಸಿ ಮುದ್ರಣ ಗೊಳಿಸಲು ಪ್ರಯತ್ನಿಸಿದ ವಚನ ಪಿತಾಮಹ ಡಾ.ಫ.ಗು ಹಳಕಟ್ಟಿ ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಯು.ಎನ್ ಸಂಗನಾಳ್ ಮಠ್ ಹೇಳಿದರು.
ನಗರದ ರೋಟರಿ ಬಾಲ ಭವನದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್ ಮತ್ತು ಸ್ಫೂರ್ತಿ ಪ್ರಕಾಶನ ತೆಲಿಗಿ ಅವರ ಸಹಯೋಗದಲ್ಲಿ ಈಚೇಗೆ ನಡೆದ ಶರಣ-ಶರಣೆಯರ ವಚನ ಗಾಯನ ಮತ್ತು ವಾಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಫ.ಗು. ಹಳಕಟ್ಟಿ ಅವರು ತಮ್ಮ ಸ್ವಂತ ಮನೆ ಮಾರಿ ಬಂದ ಹಣದಿಂದ ಮುದ್ರಣ ಯಂತ್ರ ತಂದು ಸಾಕಷ್ಟು ವಚನಗಳನ್ನು ಮುದ್ರಿಸಿ, ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ಶರಣರು ಎಂದು ಹೇಳಿದರು.
ಬಿ.ಎಂ.ಶ್ರೀ ಅವರು ಒಮ್ಮೆ ಬಿಜಾಪುರಕ್ಕೆ ಬಂದಿದ್ದಾಗ ಫ.ಗು. ಹಳಕಟ್ಟಿ ಅವರನ್ನು `ವಚನ ಗುಮ್ಮಟ’ ಎಂದಿದ್ದ ಘಟನೆಯನ್ನು ಹಿರಿಯ ಸಾಹಿತಿ ಶಿವಯೋಗಿ ಹಿರೇಮಠ್ ಸ್ಮರಿಸಿದರು.
ಸಾಹಿತಿ ಮಹಾಂತೇಶ್ ನಿಟ್ಟೂರ್ ಪ್ರಾಸ್ತಾವಿಕ ಮಾತನಾಡಿ, ವಚನಗಳನ್ನು ಪಚನ ಮಾಡಿಕೊಂಡು ಬದುಕಿಗೆ ಅಳವಡಿಸಿಕೊಂಡಾಗ ಮಾತ್ರ ಅವುಗಳ ಮಹತ್ವ ಹೆಚ್ಚಲಿದೆ ಎಂದು ಹೇಳಿದರು.
ಇದೇ ವೇಳೆ ವಿನೋದ ಅಜಗಣ್ಣನವರ್ ಹಾಗೂ ಕೆ.ಎಸ್. ಕೊಟ್ರೇಶ್ ಅವರಿಗೆ `ಸಮಾಜ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. 25ಕ್ಕೂ ಅಧಿಕ ಕವಿಗಳು ವಚನ ಗಾಯನ ಮಾಡಿದರು ಹಾಗೂ 20 ಕವಿಗಳು ವಚನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಸ್ಫೂರ್ತಿ ಪ್ರಕಾಶನದ ಅಧ್ಯಕ್ಷ ಎಂ. ಬಸವರಾಜ್, ಸಾಹಿತಿ ಬಾತಿ ಕೃಷ್ಣ, ಲೇಖಕಿ ದೀಪಿಕಾ, ಜಿ.ಎಚ್. ರಾಜಶೇಖರ್ ಗುಂಡಗಟ್ಟಿ, ಸಾಹಿತಿ ಕೆ.ಎಸ್. ವೀರಭದ್ರಪ್ಪ ತೆಲಿಗಿ, ಎಸ್. ಉಮಾದೇವಿ, ಫಕ್ಕೀರೇಶ್ ಆದಾಪುರ, ಅಣಬೇರು ತಾರೇಶ್, ಬಿ.ಎಂ.ಜಿ ವೀರೇಶ್, ಹಾಗೂ ಲಲಿತ್ ಕುಮಾರ್ ಜೈನ್ ಇದ್ದರು.