ಬದುಕಿನಲ್ಲಿ ಒಳಿತನ್ನು ಸಾಧನೆ ಮಾಡುವುದೇ ನಿಜವಾದ ಕಲ್ಯಾಣ

ಬದುಕಿನಲ್ಲಿ ಒಳಿತನ್ನು ಸಾಧನೆ ಮಾಡುವುದೇ ನಿಜವಾದ ಕಲ್ಯಾಣ

ಬಸವಪ್ರಭು ಸ್ವಾಮೀಜಿ

ದಾವಣಗೆರೆ, ಆ. 4- ಬದುಕಿನಲ್ಲಿ ಒಳಿತನ್ನು ಸಾಧನೆ ಮಾಡುವುದೇ ನಿಜವಾದ ಕಲ್ಯಾಣವಾಗಿದೆ. ಸರ್ವರಿಗೂ ಒಳಿತನ್ನು ಬಯಸಿ, ಒಳ್ಳೆಯದನ್ನು ಮಾಡಿದ ಬಸವಣ್ಣನವರು ಇಂದಿಗೂ ನಮ್ಮ ನಡುವೆ ಜೀವಂತವಾಗಿದ್ದಾರೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ವಿರಕ್ತಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ  ಹಮ್ಮಿಕೊಂಡಿದ್ದ 114 ನೇ ವರ್ಷದ ಪ್ರವಚನ `ಕಲ್ಯಾಣದಿಂದ ಉಳವಿಯಡೆಗೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಆಧುನಿಕ ಕಾಲದ ಜನರು ಯಾಂತ್ರಿಕ ಜೀವನ ನಡೆಸುತ್ತಿದ್ದಾರೆ. ಸದಾ ಕಾಲವೂ ಹಣ ಗಳಿಕೆಯಲ್ಲಿಯೇ ಮುಳುಗಿ ಹೋಗಿದ್ದಾರೆ. ಹಣದ ಹಿಂದೆ ಹೋಗಿ ಒಳಿತನ್ನು ಮರೆತಿದ್ದಾರೆ. ಹಿಂದಿನ ಕಾಲದಲ್ಲಿ ಓದು, ಬರಹ ಬರಲಾರದ ಜನರು ಒಳಿತನ್ನು ಮಾಡುವುದೇ ಬದುಕಿನ ನಿಜವಾದ ಸಾಧನೆ ಎಂದು ತಿಳಿದಿದ್ದರು, ಯಾವಾಗಲೂ ಹಣವೇ ಮುಖ್ಯ ಎಂದು ಬಡಿದಾಡಲಿಲ್ಲ. ಹಾಗಾಗಿ ಬದುಕಿನಲ್ಲಿ ಶಾಂತಿ, ನೆಮ್ಮದಿ ಇತ್ತು ಎಂದರು.

ಇಂದು ನಾವು ಹಣ, ಆಸ್ತಿಯ ಬೆನ್ನತ್ತಿ ಹೋಗಿ ಬದುಕಿನ ನೆಮ್ಮದಿ ಕಳೆದುಕೊಂಡಿದ್ದೇವೆ. ಈ ನೆಮ್ಮದಿಯನ್ನು ಪಡೆಯುವ ಮಾರ್ಗವೆಂದರೆ ಶ್ರಾವಣ. ಶ್ರಾವಣ ಎಂದರೆ ಶ್ರವಣ ಎಂದರ್ಥ. ಒಳ್ಳೆಯ ವಿಚಾರಗಳನ್ನು, ಬಸವಾದಿ ಶರಣರ ಆದರ್ಶದ ಬದುಕನ್ನು ಕೇಳಿದಾಗ ನಮ್ಮ ಬದುಕಿನಲ್ಲೂ ಒಳಿತನ್ನು ಕಾಣಲು ಸಾಧ್ಯವಾ ಗುತ್ತದೆ ಎಂದು ಹೇಳಿದರು.

ನಮ್ಮ ಅಂತರಂಗ ಶುದ್ಧಿಯಾಗಲು, ಮನ ಪರಿವರ್ತಿಸುವ ಕಾರ್ಯವನ್ನು ಮಾಡಲು ಪ್ರವಚನಗಳು ಬೇಕು. ಯಾವ ರೀತಿ ಹೊಲ ಹದ ಮಾಡಿದರೆ ಅಲ್ಲಿ ಸಮೃದ್ಧ ಬೆಳೆ ಬೆಳೆಯಲು ಸಾಧ್ಯವಾಗುತ್ತದೆಯೋ ಹಾಗೆಯೇ ಶ್ರಾವಣದಲ್ಲಿ ಹೃದಯ, ಮನಸ್ಸು ಎಂಬ ಹೊಲದಲ್ಲಿ ಸಂಸ್ಕಾರ, ಸದ್ಭಾವದ ಬೀಜಗಳನ್ನು ಬಿತ್ತನೆ ಮಾಡಿದರೆ ವ್ಯಕ್ತಿಯ ಜೀವನ ಸುಂದರವಾಗಲು ಸಾಧ್ಯ ಎಂದರು.

ಅಂತರಂಗದಲ್ಲಿ ತೋಳಲಾಟ, ಬಹಿರಂಗದಲ್ಲಿಯೂ ಬಳಲಾಟ ಇಂದಿನ ಸ್ಥಿತಿಯಾಗಿದೆ. ಇಂತಹ ತೋಳಲಾಟ, ಬಳಲಾಟದಿಂದ ಹೊರ ಬರಲು ಶರಣರ ಒಡನಾಟ ಬೇಕು. ಅದುವೇ ಸತ್ಸಂಗವಾಗಿದೆೆ. ಹಾಗಾಗಿ ಕಲ್ಯಾಣದಿಂದ ಉಳವಿಯಡೆಗೆ ಪ್ರವಚನ ಕೇಳಿ ನಾವು ಪುನೀತರಾಗೋಣ ಎಂದು ಹೇಳಿದರು.

ಮೈಸೂರಿನ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ `ಕಲ್ಯಾಣದಿಂದ ಉಳವಿಯಡೆಗೆ’ ಕುರಿತು ಪ್ರವಚನ ನೀಡಿ, ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಬಸವ ಜಯಂತಿ ಆಚರಿಸಿದ ಹೆಗ್ಗಳಿಕೆ ದಾವಣಗೆರೆ ವಿರಕ್ತಮಠದ್ದಾಗಿದೆ. 114 ವರ್ಷ ಗಳಿಂದ ಶ್ರಾವಣ ಮಾಸದಲ್ಲಿ ಪ್ರವಚನ ನಡೆಸಿ ಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ಪ್ರವಚನ ಆಲಿಸುವುದು ಒಳಿತು. ಮಳೆಗಾಲದಲ್ಲಿ ಯಾವುದೇ ಪ್ರವಾಸಗಳನ್ನು ಕೈಗೊಳ್ಳದೆ, ಇಂತಹ ಪ್ರವಚನ, ಧಾರ್ಮಿಕ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್ ಮಾತನಾಡಿ, ಮಹನೀಯರ ಉತ್ತಮ ಆಲೋಚನೆ ಗಳನ್ನು ಮಕ್ಕಳಲ್ಲಿ ಬಿತ್ತುವಂತಹ ಕೆಲಸ ಆಗಬೇಕು. ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳ ಬೇಕು. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ. ತಂದೆ-ತಾಯಂದಿರು ನೈತಿಕ ಮೌಲ್ಯಗಳನ್ನು ಬೆಳೆಸುವಂತಹ ಶಿಕ್ಷಣ ಕೊಡಿಸಬೇಕೆಂದರು.

ಶಿವಯೋಗಾಶ್ರಮ ಟ್ರಸ್ಟ್ ಕಾರ್ಯದರ್ಶಿ ಅಂದನೂರು ಮುಪ್ಪಣ್ಣ, ಅನಸೂಯ ಪಟೇಲ್, ಕಣ್ವಕುಪ್ಪೆ ಮುರುಗೇಶಪ್ಪ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್.ಬಸಪ್ಪ, ಲಂಬಿ ಮುರುಗೇಶಪ್ಪ, ಹಾಸಬಾವಿ ಕರಿಬಸಪ್ಪ, ಸಂಗಣ್ಣ, ಚಂದ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.

ಬಸವ ಕಲಾ ಲೋಕದ ಕಲಾವಿದರು ವಚನ ಸಂಗೀತ ನಡೆಸಿಕೊಟ್ಟರು. ಇದೇ ವೇಳೆ ಶಿವನಗೌಡ ಪಾಟೀಲ್ ಮತ್ತು ಗೆಳೆಯರು ಶ್ರೀ ಬಸವಪ್ರಭು ಸ್ವಾಮೀಜಿಯವರಿಗೆ ಗೌರವ ಸಮರ್ಪಣೆ ಮಾಡಿದರು.

error: Content is protected !!