ಹೊನ್ನಾಳಿಯಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರುದ್ರಪ್ಪ
ಹೊನ್ನಾಳಿ, ಆ.4- ಬಿಸಿಯೂಟ ಯೋಜನೆಯ ಯಶಸ್ವಿಗೆ ಅಧಿಕಾರಿಗಳಿಗಿಂತ ಶಿಕ್ಷಕರ ಪಾತ್ರ ಹಾಗೂ ಅವರ ಕಾಳಜಿ ಬಹುದೊಡ್ಡದು ಎಂದು ವರ್ಗಾವಣೆಗೊಂಡ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರುದ್ರಪ್ಪ ಹೇಳಿದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಪಟ್ಟಣದ ಗುರುಭವನದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಶಿಕ್ಷಣ ಇಲಾಖೆಯಲ್ಲಿ ನಿವೃತ್ತರಾದ ಹಾಗೂ ವರ್ಗಾವಣೆಗೊಂಡ ಅಧಿಕಾರಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವಳಿ ತಾಲ್ಲೂಕಿನ ಎಲ್ಲಾ ಶಾಲೆಗಲ್ಲಿ ಬಿಸಿಯೂಟ ಯೋಜನೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಆಹಾರ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ ಎಂದು ಹೇಳಿದರು.
ಅವಳಿ ತಾಲ್ಲೂಕಿನಲ್ಲಿ ಕಳೆದ ಆರು ವರ್ಷಗಳಿಂದ ತಮ್ಮ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬಿಸಿಯೂಟ ಯೋಜನೆ ಯಶಸ್ವಿಯಾಗಿ ನಡೆದಿದೆ. ನಾನು ಇದೀಗ ಚನ್ನಗಿರಿ ತಾಲ್ಲೂಕಿನ ಚಿರುಡೋಣಿ ಶಾಲೆಗೆ ವರ್ಗಾವಣೆಗೊಂಡಿದ್ದು, ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸಲಿರುವುದಾಗಿ ತಿಳಿಸಿದರು.
ಸಭೆಯಲ್ಲಿ ವಿವಿಧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ಬಸವರಾಜಪ್ಪ, ಪರಶುರಾಮ, ಹಾಲೇಶಪ್ಪ, ಸುನಂದಮ್ಮ, ಶಿಕ್ಷಣ ಇಲಾಖೆಯ ವಿನಯ್‍ರಾವ್ ಮತ್ತು ಇಸಿಓ ಬಸವರಾಜ್‌ರವರಿಗೆ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಜಿ. ಗೀತಾ, ಸಂಘದ ಗೌರವಾಧ್ಯಕ್ಷ ರಿಯಾಜ್ ಆಹ್ಮದ್, ಖಜಾಂಚಿ ಬಿ.ಎಸ್.ರುದ್ರೇಶ್, ಕಾರ್ಯದರ್ಶಿ ಪ್ರಕಾಶ ನಾಯ್ಕ, ಸಹಕಾರ್ಯದರ್ಶಿ ಚಂದ್ರಶೇಖರಪ್ಪ, ಉಪಾ ಧ್ಯಕ್ಷೆ ಕೆ.ಬಿ. ನೀಲಮ್ಮ, ಸಂಘದ ಪದಾಧಿಕಾರಿಗಳಾದ ಬಿ.ಎನ್. ಮಂಜುನಾಥ್, ಜಬ್ಬಾರ್‍ಖಾನ್, ರಾಜ ಕುಮಾರ, ಕೆ.ಜಿ.ಸುಖೇಶ್, ಉಮಾಶಂಕರ್ ಇದ್ದರು.