ಹರಿಹರ, ಆ. 2 – ನಗರದ ಹೊರವಲಯದ ಗುತ್ತೂರು ಗ್ರಾಮದ ದಲಿತ ಸಮುದಾಯಕ್ಕೆ ರುದ್ರಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಗುತ್ತೂರು ಗ್ರಾಮ ಮತ್ತು ನಗರದ ದಲಿತ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಅರ್ಪಿಸಿದರು.
ಈ ವೇಳೆ ದಲಿತ ಸಮುದಾಯ ಮುಖಂಡರು ಮಾತನಾಡಿ, ತಾಲ್ಲೂಕಿನ ಗುತ್ತೂರು ಗ್ರಾಮದಲ್ಲಿ ದಲಿತ ಸಮುದಾಯದವರಿಗೆ ಸ್ಮಶಾನ ವ್ಯವಸ್ಥೆ ಇಲ್ಲದಿರುವುದರಿಂದ, ಸುಮಾರು 70 ವರ್ಷಗಳಿಂದ ತುಂಗಭದ್ರಾ ನದಿ ದಡದಲ್ಲಿ ಶವ ಸಂಸ್ಕಾರ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಮಳೆಗಾಲ ಮತ್ತು ಹೊಳೆ ತುಂಬಿದಾಗ ಶವ ಸಂಸ್ಕಾರ ಮಾಡಲು ತೀವ್ರ ತೊಂದರೆ ಆಗುತ್ತಿದ್ದು, ಶವ ಹೊತ್ತು ನೀರಿನಲ್ಲಿ ಸಾಗುವಾಗ ಕಾಲು ಜರಿದು ಕೈ-ಕಾಲು ಮುರಿದುಕೊಂಡ ಘಟನೆಗಳೂ ನಡೆದಿವೆ ಎಂದು ಅಳಲು ತೋಡಿದರು.
ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಅಂತ್ಯಸಂಸ್ಕಾರ ಮಾಡಲು ಭಯ ಹಾಗೂ ಆತಂಕ ಪಡುವಂತಾಗಿದೆ. ಆದ್ದರಿಂದ ಗುತ್ತೂರು ಕೆಇಬಿ ಬಳಿಯ ಸರ್ವೇ ನಂ: 89/1, 77/1 ಮತ್ತು 78ರಲ್ಲಿ ಸರ್ಕಾರದ ಜಾಗವಿದ್ದು, ಇವುಗಳಲ್ಲಿ ಯಾವುದಾದ ರೊಂದನ್ನು ರುದ್ರಭೂಮಿ ಮಾಡಲು ಸ್ಥಳ ಕಲ್ಪಿಸ ಬೇಕೆಂದು ಆಗ್ರಹಿಸಿದರು.
ಮಾದಿಗ ಸಮಾಜದ ಅಧ್ಯಕ್ಷ ರಜನಿಕಾಂತ್, ಮಾಜಿ ದೂಡಾ ಸದಸ್ಯರಾದ ಎಚ್. ನಿಜಗುಣ, ಎ.ಕೆ. ಕೊಟ್ರಪ್ಪ, ನಗರಸಭೆ ಸದಸ್ಯ ಪಿ.ಎನ್. ವಿರೂಪಾಕ್ಷಪ್ಪ, ಹನುಮಂತಪ್ಪ, ಜಿ.ವಿ. ವೀರೇಶ್, ಎಂ.ಬಿ. ಅಣ್ಣಪ್ಪ, ನಾಗಭೂಷಣ, ನಾಮನಿರ್ದೇಶನ ಸದಸ್ಯ ಸಂತೋಷ ದೊಡ್ಡಮನಿ, ಭಾನುವಳ್ಳಿ ಮಂಜಪ್ಪ, ಗುತ್ತೂರು ನಿಂಗರಾಜ್, ಪ್ರತಾಪ್, ರವಿಕುಮಾರ್, ಎಚ್. ಸುಧಾಕರ್, ಕೊಟ್ರೇಶ್, ಬೇವಿನಹಳ್ಳಿ ಎ.ಕೆ. ಶಿವರಾಮ, ರಾಜಶೇಖರ, ಜಗದೀಶ್, ಮಂಜುನಾಥ್, ವಿಕ್ರಮ್, ನಿಂಗಪ್ಪ, ದೊರೆ, ಅಣ್ಣಪ್ಪ, ಸುರೇಶ್, ಹರೀಶ್, ಅಪ್ಪು, ನಾಗರಾಜ್, ಚೌಡಪ್ಪ, ರಾಜು, ಹನುಮಂತ, ಲೋಹಿತ್, ಮಲ್ಲೇಶ್, ಅಜಯ್, ಗುಂಡಿ ಬಸಪ್ಪ, ಹೊನ್ನಪ್ಪ, ಪರುಶುರಾಮ್ ಇತರರಿದ್ದರು.