ಹರಿಹರ, ಆ.4- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಬಿಜೆಪಿ, ಜೆಡಿಎಸ್ ನಾಯಕರ ಹಾಗೂ ರಾಜ್ಯಪಾಲರ ನಡೆಯನ್ನು ವಿರೋಧಿಸಿ, ದಾವಣಗೆರೆಯಲ್ಲಿ ನಾಳೆ ದಿನಾಂಕ 5ರ ಸೋಮವಾರ ಹಮ್ಮಿಕೊಂಡಿರುವ ಪ್ರತಿಭಟನೆಗೆ ಹರಿಹರ ತಾಲ್ಲೂಕಿನಿಂದ 5 ಸಾವಿರ ಜನ ಭಾಗವಹಿಸಲಿದ್ದಾರೆಂದು ಮಾಜಿ ಶಾಸಕ ಎಸ್.ರಾಮಪ್ಪ ಹೇಳಿದರು.
ನಗರದ ಕಾಳಿದಾಸ ವಿದ್ಯಾಸಂಸ್ಥೆಯ ಆವರಣದಲ್ಲಿ ಇಂದು ಕರೆದಿದ್ದ ಹರಿಹರ ತಾಲ್ಲೂಕಿನ ಅಹಿಂದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಹೇಗಾ ದರೂ ಮಾಡಿ ಅಸ್ಥಿರಗೊಳಿಸಬೇಕೆಂಬ ಬಿಜೆಪಿ-ಜೆಡಿಎಸ್ ಮುಖಂಡರ ಕುತಂತ್ರ ಫಲ ನೀಡುವುದಿಲ್ಲ. ಸಿದ್ದರಾಮಯ್ಯನವರ ಜನಪ್ರಿಯತೆ ಸಹಿಸದವರು ವಿನಾಃಕಾರಣ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದು, ಅಂತಹ ಪಕ್ಷಗಳಿಗೆ ಮುಂಬರುವ ದಿನಗಳಲ್ಲಿ ಜನ ಪಾಠ ಕಲಿಸಿದ್ದಾರೆಂದು ರಾಮಪ್ಪ ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಹಾಗೂ ವಕೀಲರಾದ ಎಂ.ನಾಗೇಂದ್ರಪ್ಪ ಮಾತನಾಡಿ, ರಾಜ್ಯಪಾಲಕರ ಮೊದಲ ನೋಟೀಸ್‌ಗೆ ಸಿಎಂ ಸಿದ್ದರಾಮಯ್ಯನವರು ಉತ್ತರ ನೀಡಿದ್ದರೂ ಮತ್ತೆ 2ನೇ ನೋಟೀಸ್ ನೀಡಿರುವ ರಾಜ್ಯಪಾಲರ ನಡೆ ಅನುಮಾನ ಹುಟ್ಟಿಸುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಸಿದ್ದರಾಮಯ್ಯನವರಂತಹ ಜನನಾಯಕ ರಾಜ್ಯದಲ್ಲಿ ಮತ್ತೊಬ್ಬರಿಲ್ಲ. ಅವರ ತೇಜೋವಧೆ ಖಂಡಿಸಿ, ಹರಿಹರ ನಗರ ಬಂದ್‌ಗೆ ಕರೆ ನೀಡುವಂತೆ ಅನೇಕ ಪ್ರಗತಿಪರ ಸಂಘಟನೆಗಳು ಚಿಂತನೆ ಮಾಡಿದ್ದು, ಈ ಬಗ್ಗೆ ತೀರ್ಮಾನಿಸಲಾಗುವುದೆಂದರು.
ಮುಖಂಡರಾದ ಕೆ.ರೇವಣಸಿದ್ದಪ್ಪ, ಜಿಗಳಿ ಆನಂದಪ್ಪ, ವೈ.ದ್ಯಾವಪ್ಪ ರೆಡ್ಡಿ, ಬಾಬುಲಾಲ್, ಸನಾವುಲ್ಲಾ, ಸೈಯದ್ ಜಾಕೀರ್, ತಾ.ಕುರುಬ ಸಮಾಜದ ಅಧ್ಯಕ್ಷ ಪೂಜಾರ್ ಹಾಲೇಶಪ್ಪ, ಸಿ.ಎನ್.ಹುಲುಗೇಶ್, ವಕೀಲ ಪರಶುರಾಮ್, ಹೆಚ್.ಕೆ.ಕೊಟ್ರಪ್ಪ, ಸವಿತಾ ಸಮಾಜದ ಬಾಲಣ್ಣ, ಬಿ.ಫೈರೋಜ್ ಸಾಬ್, ಜಿ.ವಿ.ವೀರೇಶ್, ಯು.ಕೆ.ಅಣ್ಣಪ್ಪ, ಹೆಚ್.ಕೆ.ಕನ್ನಪ್ಪ, ಜೆ.ಗುತ್ತ್ಯೆಪ್ಪ, ಕುಂಬಳೂರು ವಾಸು, ಹಬೀಬ್, ಪ್ರವೀಣ್ ಮಾತನಾಡಿ, ಸಿದ್ದರಾಮಯ್ಯರಿಗೆ ಬೆಂಬಲ ವ್ಯಕ್ತಪಡಿಸಿದರು.
ಡಿಎಸ್ಎಸ್ ತಾ.ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಬಿಜೆಪಿ ಭ್ರಷ್ಟಾಚಾರದ ಪಿತಾಮಹವಾಗಿದೆ.ಹರಿಹರ ಬಂದ್ ಸ್ವಯಂ ಪ್ರೇರಿತವಾಗಿ ನಡೆಯಲಿದೆ ಎಂದರು.
ಸಭೆಯಲ್ಲಿ ಕೆ.ಬಿ.ರಾಜಶೇಖರ್, ಸುರೇಶ್ ಹಾದಿಮನಿ, ಮನ್ಸೂರ್ ಅಲಿ, ಮಲೇಬೆನ್ನೂರಿನ ನಯಾಜ್, ಷಾ ಅಬ್ರಾರ್, ಪಿ.ಹೆಚ್.ಶಿವಕುಮಾರ್, ಹಾಲಿವಾಣದ ಹಾಲೇಶಪ್ಪ, ರೇವಣಸಿದ್ದಪ್ಪ, ಹರಳಹಳ್ಳಿ ಹನುಮಂತಪ್ಪ, ಗೋವಿನಾಳ್ ಚಂದ್ರಪ್ಪ ಸೇರಿದಂತೆ ನೂರಾರು ಮುಖಂಡರು ಹಾಜರಿದ್ದರು.