ಮಲೇಬೆನ್ನೂರು, ಆ. 2 – ಹರಿಹರ ಲೋಕೋಪಯೋಗಿ ಇಲಾಖೆಯ ಕಛೇರಿಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಲೇಬೆನ್ನೂರಿನ ಬಿ.ಜಿ. ಶಿವರುದ್ರಪ್ಪ ಅವರು ಬುಧವಾರ ಸೇವೆಯಿಂದ ವಯೋ ನಿವೃತ್ತಿ ಹೊಂದಿದರು.
ಈ ನಿಮಿತ್ತ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಬಿ.ಜಿ. ಶಿವರುದ್ರಪ್ಪ ಅವರನ್ನು ಅವರ ಕಛೇರಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಗುತ್ತಿಗೆದಾರರು ಆತ್ಮೀಯವಾಗಿ ಸನ್ಮಾನಿಸಿ ನಿವೃತ್ತ ಜೀವನಕ್ಕೆ ಶುಭ ಕೋರಿ ಬೀಳ್ಕೊಟ್ಟರು.
ಲೋಕೋಪಯೋಗಿ ಇಲಾಖೆಯ ಎಇಇ ಸುಂದರ್, ಜಿ.ಪಂ. ಎಇಇ ಗಿರೀಶ್, ಸಹಾಯಕ ಇಂಜಿನಿಯರ್ ಸೋಮಾ ನಾಯ್ಕ್, ಗುತ್ತಿಗೆದಾರರಾದ ಬಿ.ಎಂ. ಜಗದೀಶ್ವರಸ್ವಾಮಿ, ಎ.ಟಿ.ಕೆ. ರಮೇಶ್, ಬಿ.ಕೆ. ಚಂದ್ರಶೇಖರ್, ಬಾನುವಳ್ಳಿ ರುದ್ರೇಶ್, ಕೊಕ್ಕನೂರು ರಾಮಚಂದ್ರಪ್ಪ, ಜಿಗಳಿ ಹನುಮಗೌಡ, ನಿವೃತ್ತ ಶಿಕ್ಷಕರಾದ ಗೋವಿಂದಪ್ಪ ಸಾವಜ್ಜಿ, ಜಿ.ಆರ್. ನಾಗರಾಜ್, ಪತ್ರಕರ್ತ ಜಿಗಳಿ ಪ್ರಕಾಶ್ ಅವರುಗಳು ಮಾತನಾಡಿ, ಶಿವರುದ್ರಪ್ಪ ಅವರಿಂದಾಗಿ ಮಲೇಬೆನ್ನೂರು ಭಾಗದ ರಸ್ತೆಗಳಿಗೆ ಕಾಯಕಲ್ಪ ಸಿಕ್ಕಿರುತ್ತದೆಂದು ಅವರ ಸೇವೆಯನ್ನು ಕೊಂಡಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವರುದ್ರಪ್ಪ ಅವರು 2003 ರಲ್ಲಿ ಬ್ಯಾಕ್‌ಲಾಗ್ ಹುದ್ದೆ ಮೂಲಕ ಸರ್ಕಾರಿ ಸೇವೆಗೆ ಸೇರಿ, ಚಳ್ಳಿಕೆರೆ ಪಿಡಬ್ಲ್ಯೂಡಿ ಕಛೇರಿಯಲ್ಲಿ ನಂತರ ದಾವಣಗೆರೆ ನೀರಾವರಿ ಇಲಾಖೆ ಕಛೇರಿಯಲ್ಲಿ ತದ ನಂತರ ಅಜ್ಜಂಪುರ ಭದ್ರಾ ಮೇಲ್ದಂಡೆ ಯೋಜನೆಯ ಕಛೇರಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಅಭಿವೃದ್ಧಿ ಕಾಣದೇ ನೆನೆಗುದಿಗೆ ಬಿದ್ದಿದ್ದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಆಸಕ್ತಿ ವಹಿಸಿದ ತೃಪ್ತಿ ನನಗಿದೆ ಎಂದರು.
ನಿವೃತ್ತ ಶಿಕ್ಷಕ ಡಿ. ರವೀಂದ್ರಪ್ಪ, ಗುತ್ತಿಗೆದಾರರಾದ ಜಿ.ಪಿ. ಮಂಜುನಾಥ್, ಗೋವರ್ಧನ್ ಸಾವಜ್ಜಿ, ಬಿ.ಸಿ. ರುದ್ರೇಶ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.