ರಜತ ಮಹೋತ್ಸವದಲ್ಲಿ ಶಿವ ಸೊಸೈಟಿ – ತರಳಬಾಳು ಶ್ರೀ ಸಂತಸ

ರಜತ ಮಹೋತ್ಸವದಲ್ಲಿ ಶಿವ ಸೊಸೈಟಿ – ತರಳಬಾಳು ಶ್ರೀ ಸಂತಸ

ಹೊನ್ನಾಳಿ, ಆ. 2- ಸೊಸೈಟಿ ನಿರ್ದೇಶಕರಿಗೆ ಕನಿಷ್ಠ ಠೇವಣಿಯ ನಿರ್ಬಂಧ, ಸೂಚಿಸುವ ಸಾಲಗಾರರು ಸಾಲ ಮರುಪಾವತಿಸದಿದ್ದರೆ ಠೇವಣಿ ಹಣ ಪಾವತಿಸಿಕೊಳ್ಳುವ ಕಠಿಣ ನಿರ್ಧಾರದಿಂದ ಸೊಸೈಟಿ ಲಾಭದಾಯಕವಾಗುವ ಜೊತೆಗೆ ಬೆಳ್ಳಿ ಹಬ್ಬದ ಆಚರಣೆಗೆ ಮುಂದಾಗಿರುವುದು ಸಂತಸದ ವಿಚಾರ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಹೊನ್ನಾಳಿ  ತಾಲೂಕಿನ ಗೊಲ್ಲರಹಳ್ಳಿ ತರಳ ಬಾಳು ಸಮುದಾಯ ಭವನದಲ್ಲಿ ಶುಕ್ರವಾರ ನಡೆದ  ಶಿವ ಕೋ- ಆಪರೇಟಿವ್ ಸೊಸೈಟಿಯ `ಬೆಳ್ಳಿ ಹಬ್ಬ ಆಚರಣೆ ಮಹೋತ್ಸವ’ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಈ ಸೊಸೈಟಿಯು ಉತ್ತರೋತ್ತರವಾಗಿ ಬೆಳೆದು ಅಭಿವೃದ್ಧಿ ಹೊಂದುವಂತಾಗಲೆಂದು ಶುಭ ಹಾರೈಸಿದ ಶ್ರೀಗಳು, ಕಳೆದ 25 ವರ್ಷಗಳಿಂದ ಸತತವಾಗಿ ಸೊಸೈಟಿ ಮುನ್ನಡೆಸಿಕೊಂಡು ಬಂದುದಲ್ಲದೇ ನಾಲ್ಕು ಶಾಖೆಗಳನ್ನು ತೆರೆಯಲು ಸಹಕರಿಸಿದ ನಿರ್ದೇಶಕರು, ಸದಸ್ಯರನ್ನು ಅಭಿನಂದಿಸಿದರು.

ಗೊಲ್ಲರಹಳ್ಳಿ ಗ್ರಾಮದಲ್ಲಿ ಭವ್ಯವಾದ ತರಳಬಾಳು ಸಮುದಾಯ ಭವನ ನಿರ್ಮಾಣದಿಂದ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಜನತೆ ಅನುಕೂಲವಾಗಲಿದೆ ಎಂದು ಹೇಳಿದರು.

ಶಾಸಕ ಶಾಂತನಗೌಡ ಮಾತನಾಡಿ, 25 ವರ್ಷಗಳ ಹಿಂದೆ ಶಿವ ಸೊಸೈಟಿ ಆರಂಭಿಸಿ, ಎರಡು ವರ್ಷದಲ್ಲಿ ಕೇಂದ್ರ ಕಚೇರಿ ಆರಂಭಿಸಿ ಉದ್ಘಾಟನೆ ಗೊಂಡಿದೆ. ಈ ಸೊಸೈಟಿಯು 4 ಶಾಖೆಗಳನ್ನು, ಎರಡು ಸ್ವಂತ ಕಟ್ಟಡ ಹೊಂದಿದ್ದರೆ, ಇನ್ನೆರಡು ಶಾಖೆಗಳ ಕಟ್ಟಡ ನಿರ್ಮಾಣವಾಗಬೇಕಿದೆ ಎಂದರು.

ಸಂಸ್ಥಾಪಕ ಅಧ್ಯಕ್ಷ ಬೆನಕನಹಳ್ಳಿ ಎ.ಜಿ. ಚಂದ್ರಶೇಖರಪ್ಪ ಸೇರಿದಂತೆ ಅನೇಕ ಸಮಾಜ  ಬಾಂಧವರಿಂದ ಸೊಸೈಟಿ ಬೆಳೆದು ಬಂದದ್ದನ್ನು ಸ್ಮರಿಸಿದ ಶಾಸಕರು ಇದೊಂದು ಮಾದರಿಯ ಸೊಸೈಟಿಯಾಗಿದೆ ಎಂದರು.

ಗುರುಗಳ ಹಾಗೂ ಸಮಾಜದ ಬಹುಮುಖ್ಯ ಕನಸು, ಅಭಿಲಾಷೆ ಎಂದರೆ ತರಳಬಾಳು ಸಮುದಾಯ ಭವನ ಪೂರ್ಣಗೊಳ್ಳುವುದಾಗಿದ್ದು,  ಇದು ಪೂರ್ಣಗೊಳ್ಳಲು  ಹಣದ ಅಭಾವವಿರುವ ಕಾರಣ 1 ಕೋಟಿ ರೂ.ಗಳನ್ನು ಶ್ರೀಗಳು ಸಮಾಜಕ್ಕೆ ಆಶೀರ್ವಾದ ರೂಪದಲ್ಲಿ ನೀಡುವಂತೆ ಸಮಾಜದ ಪರವಾಗಿ ಮನವಿ ಮಾಡುವೆ ಏಕೆಂದರೆ ಎಲ್ಲಾ `ಬಸ್ ಫುಲ್ –  ಕಲೆಕ್ಷನ್ ನಿಲ್’ ಎನ್ನುವಂತಾಗಿದೆ ಎಂದು ಹೇಳಿದರು.

ತಾಲ್ಲೂಕು ಸಾಧು ಸಮಾಜದ ಅಧ್ಯಕ್ಷ ಹುಣಸಘಟ್ಟ ಗದುಗೇಶ ಮಾತನಾಡಿ, ತರಳಬಾಳು ಸಮುದಾಯ ಭವನ ಪೂರ್ಣಗೊಳ್ಳಲು 1 ಕೋಟಿ 50 ಲಕ್ಷ ರೂ. ಅವಶ್ಯಕತೆ ಇದೆ. ಗುರುಗಳ ಆಶೀರ್ವಾದ ಭಕ್ತರ ಸಹಕಾರದಿಂದ ಪೂರ್ಣಗೊಳ್ಳಬೇಕಿದೆ ಎಂದರು. 

ಕೋಟೆ ಮಲ್ಲೂರು ಬೆನಕಪ್ಪಗೌಡರು ಮಾತನಾಡಿ, ತಾಲೂಕಿನಲ್ಲಿ ಹೆಚ್.ಎಸ್. ರುದ್ರಪ್ಪನವರಂತೆ ಬೆನಕನಹಳ್ಳಿ ಚಂದ್ರಪ್ಪ ಗೌಡ್ರು ಹಾಗೂ ಮಾಜಿ ಶಾಸಕ ಬಸನಗೌಡರ ಬಗ್ಗೆಯೂ ಪುಸ್ತಕ ರೂಪದಲ್ಲಿ ಪರಿಚಯಿಸುವ ಕಾರ್ಯವಾದರೆ ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಜಿ ಶಾಸಕ ರೇಣುಕಾಚಾರ್ಯ, ಸಾಧು ವೀರಶೈವ ಸಮಾಜದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಚೀಲೂರು ವಿಶ್ವನಾಥ್ ಮಾತನಾಡಿದರು.

ಸೊಸೈಟಿ ಅಧ್ಯಕ್ಷ ಆರುಂಡಿ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಮತಿ ಶಿವಪ್ಪ, ಡಿ.ಎಸ್. ಪ್ರದೀಪ್ ಗೌಡ್ರು, ಕೆಂಗನಹಳ್ಳಿ ಷಣ್ಮುಖಪ್ಪ, ಗುರುಮೂರ್ತಿ, ತೀರ್ಥಲಿಂಗಪ್ಪ, ಜ್ಯೋತಿ ಅಕ್ಕ, ಸೊಸೈಟಿ ಉಪಾಧ್ಯಕ್ಷೆ ಯಶೋಧಮ್ಮ, ನಿರ್ದೇಶಕರಾದ ಶೈಲೇಶ್, ಚಂದ್ರಪ್ಪ, ಕೆಂಚಪ್ಪ, ಚನ್ನವೀರಪ್ಪ, ಬಸವರಾಜ್, ಶಂಕರಗೌಡ, ಕರಿಬಸಪ್ಪ, ಶಿವಕುಮಾರ್, ಚೇತನ್ ಕುಮಾರ್, ಮಂಜುಳಾ, ಕೃಷ್ಣ ನಾಯಕ್, ಕಾರ್ಯದರ್ಶಿ  ರುದ್ರೇಶ್ ಶಿವಮೊಗ್ಗ, ಶಿಕಾರಿಪುರ ಅರತಾಳ್ ಬ್ಯಾಂಕಿನ ಅಧ್ಯಕ್ಷರು ಸೇರಿದಂತೆ ಹೊನ್ನಾಳಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

error: Content is protected !!