ಹರಿಹರ, ಆ.1- ನಗರದಲ್ಲಿ ಮೈದುಂಬಿಕೊಂಡು ಹರಿಯುತ್ತಿರುವ ತುಂಗಭದ್ರಾ ನದಿಯಿಂದಾಗಿ ನದಿ ಪಕ್ಕದಲ್ಲಿ ಇರುವ ಜಮೀನಿಗೆ ನೀರು ನುಗ್ಗಿದ್ದು, ಹಲವಾರು ಬೆಳೆಗಳು ನಾಶವಾಗಿವೆ. ಜೊತೆಗೆ ಅನೇಕ ಇಟ್ಟಿಗೆ ಬಟ್ಟಿಗಳೂ ಸಹ ಜಲಾವೃತವಾಗಿವೆ.
ನಗರದಲ್ಲಿ ತುಂಗಭದ್ರಾ ನದಿಯ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ ಗಂಗಾನಗರ, ತೆಗ್ಗಿನಕೇರಿ ಸೇರಿದಂತೆ ಹಲವಾರು ಬಡಾವಣೆಯಲ್ಲಿ ಸಾಕಷ್ಟು ಮನೆಗಳು ನೀರಿನಲ್ಲಿ ಮುಳಗಿಕೊಂಡಿವೆ. ಗುತ್ತೂರು, ದೀಟೂರು, ಸಾರಥಿ, ಕೋಡಿಯಾಲ – ಹೊಸಪೇಟೆ, ಚಿಕ್ಕಬಿದರಿ ಗ್ರಾಮದಲ್ಲಿ ಅನೇಕ ಇಟ್ಟಿಗೆ ಬಟ್ಟೆಗಳು ನೀರಿನಲ್ಲಿ ಮುಳಗಿಕೊಂಡು ಲಕ್ಷಾಂತರ ರೂ.ಗಳಷ್ಟು ನಷ್ಟವಾಗಿದೆ. ಅನೇಕರ ಜಮೀನಿಗೆ ನೀರು ನುಗ್ಗಿದ್ದರಿಂದ ಸಾಕಷ್ಟು ಬೆಳೆಗಳೂ ಸಹ ಹಾನಿಯಾಗಿವೆ.
ನಗರದಲ್ಲಿ ರಭಸವಾಗಿ ಹರಿಯುತ್ತಿರುವ ನೀರಿನ ರಮಣೀಯ ದೃಶ್ಯ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಅದರ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯ ಹಳೆಯ ಸೇತುವೆಯ ಮೇಲೆ ವಾಹನಗಳು ಮತ್ತು ಪ್ರವಾಸಿಗರು ಓಡಾಡದಂತೆ ಮತ್ತು ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದಲ್ಲಿ ತುಂಗಾರತಿ ಸ್ಥಳದಲ್ಲಿ ಕೂಡ ಓಡಾಡದಂತೆ ಪೊಲೀಸ್ ಇಲಾಖೆಯ ವತಿಯಿಂದ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಮತ್ತು ಸೇತುವೆ ಪಕ್ಕದಲ್ಲಿರುವ ತಡೆಗೋಡೆ ಮೇಲೆ ನಿಂತುಕೊಂಡು ನದಿ ವೀಕ್ಷಿಸುವುದನ್ನು ತಡೆಯಲು ಕಳಪೆ ಗುಣಮಟ್ಟದ ಆಯಿಲ್ ಹಾಕಿ ಜನರು ನಿಲ್ಲದಂತೆ ನಿರ್ಬಂಧಗಳನ್ನು ಹೇರಲಾಗಿದೆ.
ನದಿ ನೋಡಲು ಆಗಮಿಸುವ ಪ್ರವಾಸಿಗರು ಐಸ್ ಕ್ರೀಂ, ಸೌತೆಕಾಯಿ, ಮೆಕ್ಕೆಜೋಳ, ಬೇಕರಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಬಾಯಿ ಚಪಲವನ್ನು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ರಾಘವೇಂದ್ರ ಸ್ವಾಮಿ ಮಠ, ಆಂಜನೇಯ ಸ್ವಾಮಿ, ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದುಕೊಂಡು ಮನೆಗಳಿಗೆ ತೆರಳುತಿದ್ದಾರೆ. ಅನೇಕ ಯುವಕರು ನದಿಯಲ್ಲಿ ಹರಿಯುವ ನೀರಿನ ಬಳಿ ಹೋಗುವುದಕ್ಕೆ ಮುಂದಾಗುತ್ತಿದ್ದು, ಇದರಿಂದಾಗಿ ಅಪಾಯಕ್ಕೆ ಬಲಿ ಯಾಗುತ್ತಾರೆ ಎಂದು ಮತ್ತು ವಾಹನಗಳು ಹೆಚ್ಚಾಗಿ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಪೊಲೀಸ್ ಇಲಾಖೆ ಕೂಡ ಕೆಲವು ಸಿಬ್ಬಂದಿಗಳನ್ನು ಸೇತುವೆಯ ಹತ್ತಿರದಲ್ಲಿ ನಿಯೋಜಿಸಿದೆ.