ಶಾಸಕ ಎಸ್ಸೆಸ್ ಹೇಳಿಕೆಗೆ ಯಶವಂತರಾವ್ ಆಕ್ಷೇಪ

ಶಾಸಕ ಎಸ್ಸೆಸ್ ಹೇಳಿಕೆಗೆ ಯಶವಂತರಾವ್ ಆಕ್ಷೇಪ

ದಾವಣಗೆರೆ, ಜು. 29 – ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಬಗ್ಗೆ ನೀಡಿರುವ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿರಿಯರಾಗಿರುವ ಎಸ್ಸೆಸ್ 40 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದು, ಅವರು ಸಿದ್ದೇಶ್ವರ ಅವರ ಬಗ್ಗೆ ಏಕವಚನದಿಂದ ಮಾತನಾಡಿರುವುದು ಎಷ್ಟು ಸರಿ ಎಂದು ಕೇಳಿದ್ದಾರೆ. ಮತ್ತೊಬ್ಬರ ಬಗ್ಗೆ ಮಾತನಾಡುವ ಮೊದಲು ಸಚಿವರಾಗಿರುವ ನಿಮ್ಮ ಪುತ್ರ ಮಲ್ಲಿಕಾರ್ಜುನ್ ಅವರಿಗೆ ಹಿರಿಯರ ಬಗ್ಗೆ ಯಾವ ರೀತಿ ನಡೆದುಕೊಳ್ಳಬೇಕೆಂಬುದನ್ನು ಪಾಠ ಹೇಳಿಕೊಡಿ ಎಂದಿದ್ದಾರೆ.

ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ತಮ್ಮ ಮನೆಗೆ ಅತಿಥಿಯಾಗಿ ಆಗಮಿಸಿದ್ದ ಸಂದರ್ಭದಲ್ಲಿ ಸಚಿವ ಮಲ್ಲಿಕಾರ್ಜುನ್ ಅವರು  ಏಕವಚನದಿಂದ ಮಾತನಾಡಿದ್ದನ್ನು ಎಸ್ಸೆಸ್ ಮರೆತಂತಿದೆ ಎಂದು ಯಶವಂತರಾವ್ ಹೇಳಿದ್ದಾರೆ.

ಜಿ.ಎಂ. ಸಿದ್ದೇಶ್ವರ ಅವರು ಎಲ್ಲೂ ಸಹಿತ ಬಿಜೆಪಿ ರಾಜ್ಯ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆ ಕರೆದಾಗ ದಾವಣಗೆರೆ ಜಿಲ್ಲೆಯಲ್ಲಿ ನಡೆದಂತಹ ಜಿಲ್ಲೆಯ ವಿದ್ಯಮಾನಗಳ ಬಗ್ಗೆ ನನಗೆ ರಾಜ್ಯ ನಾಯಕರು ಮಾತನಾಡಲು ಅವಕಾಶ ಕೊಡಲಿಲ್ಲ ಎಂದು ತಮ್ಮ ಅಸಮಾಧಾನವನ್ನು ಪತ್ರಿಕೆಗಳ ಮುಖಾಂತರ ಹಂಚಿಕೊಂಡಿದ್ದಾರೆ. ಅದನ್ನು ಕುಂಬಳಕಾಯಿ ಕಳ್ಳ ಅಂದ್ರೆ ನೀವೇಕೆ ಹೆಗಲು ಮುಟ್ಟಿಕೊಳ್ಳುತ್ತೀರಿ ಎಂದು ಎಸ್ಸೆಸ್ ಅವರನ್ನು ಪ್ರಶ್ನಿಸಿದ್ದಾರೆ.

error: Content is protected !!