ಹೊನ್ನಾಳಿ, ಜು.31- ಪಟ್ಟಣದ ಬಾಲರಾಜ ಘಾಟ್ ಹತ್ತಿರದ ತುಂಗಭದ್ರಾ ನದಿಯಲ್ಲಿ ಮಂಗಳವಾರ ಮಧ್ಯಾಹ್ನ ನೀರಿನಲ್ಲಿ ತೇಲಿ ಹೋದ ವ್ಯಕ್ತಿಯೊಬ್ಬನ ಸುಳಿವು ಇದುವರೆಗೂ ದೊರೆಯದೇ ಇರುವ ಬಗ್ಗೆ ವರದಿಯಾಗಿದೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕು ನಾಗವಂದ ಗ್ರಾಮದ ಶಿವಪ್ಪ ಗೊರಪ್ಪ (85) ಬಿನ್ ಸಿದ್ದವೀರಪ್ಪ ಎಂದು ತಿಳಿದು ಬಂದಿದೆ.
ನದಿಯಲ್ಲಿ ನಾಪತ್ತೆಯಾಗಿರುವ ವ್ಯಕ್ತಿ ಬಿಳಿ ಬಣ್ಣದ ಶರ್ಟ್ ಧರಿಸಿದ್ದರೆನ್ನಲಾಗಿದೆ.
ಮಗ ಲಿಂಗರಾಜ್ ರಟ್ಟೆಹಳ್ಳಿ ಪೊಲೀಸ್ ಠಾಣೆಯಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ದೂರು ದಾಖಲಿಸಿದ್ದು, ರಟ್ಟಿಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ನದಿ ದಡದ ಹತ್ತಿರದಲ್ಲಿ ಕೂತಿದ್ದ ಈ ವ್ಯಕ್ತಿಗೆ ಕೆಲ ಸಾರ್ವಜನಿಕರು ಎಚ್ಚರಿಕೆ ನೀಡಿದ ನಿದರ್ಶನವಿದ್ದು, ಕೆಲ ನಿಮಿಷಗಳ ಅಂತರದಲ್ಲಿ ಈ ಅವಘಡ ನಡೆದಿದೆ.
ಏಕಾಏಕಿ ನದಿಯ ಪ್ರವಾಹವು ಹೆಚ್ಚಾಗಿದ್ದು, ಈ ವ್ಯಕ್ತಿಯು ಕಾಲು ಜಾರಿ ಬಿದ್ದರೋ ? ಅಥವಾ ಜೀವನದ ಜಿಗುಪ್ಸೆಯಿಂದ ನದಿಗೆ ಹಾರಿರಬಹುದೇ ? ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಮುಂದಿನ ಗ್ರಾಮಗಳ ನದಿ ದಡದಲ್ಲಿ ಈ ವಿಚಾರವಾಗಿ ಪ್ರಚಾರಪಡಿಸಿರುವ ಬಗ್ಗೆ ತಿಳಿದುಬಂದಿದೆ. ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿರುವ ಈ ಸ್ಥಳದಲ್ಲೇ ಒಂದು ದಿನ ಮುಂಚಿತವಾಗಿ ನದಿ ದಡದಲ್ಲಿ ಯಾವುದೋ ಜಲಚರ ಪ್ರಾಣಿ ಬಂದಿದೆ ಎಂದು ಮೊಬೈಲ್‌ನಲ್ಲಿ ಸೆರೆಹಿಡಿಯುವಾಗ ಈ ವ್ಯಕ್ತಿ ನದಿಯಲ್ಲಿ ತೇಲಿ ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಇಂತಹ ಘಟನೆ ಮರುಕಳಿಸದಂತೆ ತಾಲ್ಲೂಕು ಹಾಗೂ ಜಿಲ್ಲಾ ಆಡಳಿತ ಮುಂಜಾಗ್ರತೆ ಸಿದ್ಧತೆಗಳಿದ್ದರೆ ಒಳಿತಾಗುತ್ತದೆ.