ಶಾಂತವಾಗಿದ್ದ ಜಮ್ಮುವಿನಲ್ಲೀಗ ಉಗ್ರ ಚಟುವಟಿಕೆ

ಶಾಂತವಾಗಿದ್ದ ಜಮ್ಮುವಿನಲ್ಲೀಗ ಉಗ್ರ ಚಟುವಟಿಕೆ

ಸೈನ್ಯದ ತಂತ್ರಗಾರಿಕೆಯಲ್ಲಿ ಬದಲಾವಣೆ ತರಲು ಪರಿಣಿತರ ಸಲಹೆ

ಜಮ್ಮು, ಜು. 28 – ಸಾಮಾನ್ಯವಾಗಿ ಶಾಂತವಾಗಿರುತ್ತಿದ್ದ ಜಮ್ಮು ವಲಯದಲ್ಲಿ ಇತ್ತೀಚಿಗೆ ಉಗ್ರವಾದಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಉಗ್ರವಾದ ವಿರೋಧಿ ತಂತ್ರಗಾರಿಕೆಯಲ್ಲಿ ಸಮಗ್ರ ಬದಲಾವಣೆ ತರಬೇಕಿದೆ ಎಂದು ರಕ್ಷಣಾ ಪರಿಣಿತರು ಸಲಹೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್. ಹೂಡ, ಉಗ್ರವಾದಿ ತಂತ್ರಗಳನ್ನು ಹತ್ತಿಕ್ಕಲು ಸಕ್ರಿಯವಾದ ಯೋಜನೆ ಹೊಂದಬೇಕಿದೆ ಎಂದು ಹೇಳಿದ್ದಾರೆ.

ಭದ್ರತಾ ಸಂಸ್ಥೆಗಳು ತಮ್ಮ ಇತ್ತೀಚಿನ ಲೋಪಗಳಿಂದ ಪಾಠ ಕಲಿತು ತಪ್ಪುಗಳನ್ನು ಸರಿಪಡಿಸಿಕೊಳ್ಳಲಿವೆ ಎಂದು ಸೈನ್ಯದ ಮಾಜಿ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಪರಮ್‌ಜಿತ್ ಸಿಂಗ್ ಸಂಘ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ವಾರಗಳಲ್ಲಿ ಜಮ್ಮು ವಲಯದಲ್ಲಿ ಸರಣಿ ಹಿಂಸಾಚಾರದ ಘಟನೆಗಳು ನಡೆಯುತ್ತಿವೆ. ಸೈನಿಕರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಒಬ್ಬರು ಕ್ಯಾಪ್ಟನ್ ಸೇರಿದಂತೆ ಒಂಬತ್ತು ಸೈನಿಕ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಕಥುವ ಜಿಲ್ಲೆಯಲ್ಲಿ ಇತ್ತೀಚೆಗೆ ದಾಳಿ ನಡೆಸಿದ ಉಗ್ರರು ಇನ್ನೂ ಪತ್ತೆಯಾಗಿಲ್ಲ.

ಈ ಹಿನ್ನೆಲೆಯಲ್ಲಿ ಮಾತನಾಡಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಹೂಡ, ಕಾಶ್ಮೀರದಲ್ಲಿ ಉಗ್ರರು ಸೀಮಿತ ಸ್ಥಳದಲ್ಲಿದ್ದರು. ಆದರೆ ಜಮ್ಮುವಿನಲ್ಲಿ ಕಠಿಣವಾದ ಪ್ರದೇಶಗಳಲ್ಲಿ ಹರಡಿದ್ದಾರೆ. ಇದು ಉಗ್ರವಾದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಸಂಕೀರ್ಣತೆ ತಂದಿದೆ ಎಂದಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಸೈನಿಕ ಪಡೆಗಳು ಎಂಟರಿಂದ ಹತ್ತು ಗಂಟೆಗಳ ಕಾಲ ಚಲಿಸಿ ನಿರ್ದಿಷ್ಟ ಸ್ಥಳ ತಲುಪಬೇಕಿದೆ ಎಂದು ಹೇಳಿದ್ದಾರೆ.

ಜಮ್ಮು ವಲಯದಲ್ಲಿ ಸುದೀರ್ಘ ಕಾಲದಿಂದ ಶಾಂತಿ ನೆಲೆಸಿತ್ತು. ಇದರಿಂದಾಗಿ ಎಚ್ಚರಿಕೆ ಕ್ರಮದಲ್ಲಿ ಲೋಪವಾಗಿರುವ ಸಾಧ್ಯತೆ ಇದೆ. ಭದ್ರತಾ ಸಂಸ್ಥೆಗಳು ಯಾವುದೇ ಕಾರಣಕ್ಕೂ ಉದಾಸೀನ ಧೋರಣೆ ತಳೆಯಬಾರದು ಎಂದು ಹೂಡ ಹೇಳಿದ್ದಾರೆ.

ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಪರಮ್‌ಜಿತ್‌ ಸಿಂಗ್ ಸಂಘ, ಭದ್ರತಾ ಪಡೆಗಳು ಇತ್ತೀಚಿನ ಹಿನ್ನಡೆಗಳಿಂದ ಪಾಠ ಕಲಿಯುವ ಸಾಮರ್ಥ್ಯ ಹೊಂದಿವೆ ಹಾಗೂ ಉಗ್ರವಾದ ವಿರೋಧಿ ಕಾರ್ಯಾಚರಣೆಯಲ್ಲಿ ಸುಧಾರಣೆ ತರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಪ್ಪುಗಳು ಪುನರಾವರ್ತನೆ ಆಗದಿರಲು ನಾವು ಪ್ರಾಮಾಣಿಕವಾಗಿ ಕಲಿಯಬೇಕಿದೆ ಹಾಗೂ ತಪ್ಪುಗಳನ್ನು ಸರಿಪಡಿಸಬೇಕಿದೆ ಎಂದವರು ಹೇಳಿದ್ದಾರೆ.

2015ರಲ್ಲಿ ಉಗ್ರವಾದದ ವಿರುದ್ಧ ನಿರ್ಣಾಯಕ ಹೋರಾಟ ನಡೆಸಿದ ನಂತರ ಜಮ್ಮು ಉಗ್ರವಾದಿ ಚಟುವಟಿಕೆಗಳಿಂದ ಬಹುತೇಕ ಮುಕ್ತವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಜಮ್ಮುವಿನಲ್ಲಿ ಹಿಂಸಾಚಾರ ಮತ್ತೆ ಕಂಡುಬರುತ್ತಿದೆ. ವಿಶೇಷವಾಗಿ ಗಡಿ ಜಿಲ್ಲೆಗಳಾದ ರಜೌರಿ ಹಾಗೂ ಪೂಂಚ್ ಜಿಲ್ಲೆಗಳಲ್ಲಿ ಉಗ್ರವಾದಿ ಚಟುವಟಿಕೆಗಳು ಹೆಚ್ಚಾಗಿವೆ.

2021ರ ನಂತರ ಈ ಭಾಗದಲ್ಲಿ 52 ಭದ್ರತಾ ಸಿಬ್ಬಂದಿ ಸೇರಿದಂತೆ 70 ಜನರು ಉಗ್ರವಾದಿ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ.

ಈ ಹಿಂದೆ ಉಗ್ರವಾದ ವಿರೋಧಿ ಹೋರಾಟದಲ್ಲಿ ಸ್ಥಳೀಯರು ದೊಡ್ಡ ಮಟ್ಟದಲ್ಲಿ ಭದ್ರತಾ ಪಡೆಗಳಿಗೆ ನೆರವಾಗಿದ್ದರು. ಈಗಲೂ ಉಗ್ರರಿಗೆ ಸ್ಥಳೀಯರು ನೆರವು ನೀಡಿರಲಿಕ್ಕಿಲ್ಲ. ಈ ಹಿಂದೆಯೇ ಇದ್ದ ಜಾಲವನ್ನು ಬಳಸಿಕೊಂಡು ಉಗ್ರರು ದಾಳಿ ನಡೆಸುತ್ತಿರಬಹುದು ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಸಂಘ ಹೇಳಿದ್ದಾರೆ.

error: Content is protected !!