ಉಕ್ಕಡಗಾತ್ರಿ-ಫತ್ತೇಪುರ ಸಂಪರ್ಕ ಬಂದ್
ಮಲೇಬೆನ್ನೂರು, ಜು.26- ಮಲೆನಾಡಿನಲ್ಲಿ ಮುಂಗಾರು ಮಳೆ ಶುಕ್ರವಾರದಿಂದ ಮತ್ತೆ ಜೋರಾಗಿದ್ದು, ತುಂಗಾ ಮತ್ತು ಭದ್ರಾ ನದಿಯಲ್ಲಿ ನೀರಿನ ಹರಿವು ಮತ್ತಷ್ಟು ಏರಿಕೆಯಾಗಿದೆ.
ಗಾಜನೂರಿನ ತುಂಗಾ ಜಲಾಶಯಕ್ಕೆ ಶುಕ್ರವಾರ ಬೆಳಗ್ಗೆ 60 ಸಾವಿರ ಕ್ಯೂಸೆಕ್ಸ್ ಇದ್ದ ಒಳ ಹರಿವು ಸಂಜೆ 70 ಸಾವಿರ ಕ್ಯೂಸೆಕ್ಸ್‌ಗೆ ಏರಿಕೆ ಕಂಡಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಮತ್ತೆ ಹೆಚ್ಚಾಗಿದ್ದು, ಉಕ್ಕಡಗಾತ್ರಿ – ಫತ್ತೇಪುರ ಸಂಪರ್ಕ ಸೇತುವೆ ನದಿ ಹಿನ್ನೀರಿನಲ್ಲಿ ಮತ್ತೆ ಜಲಾವೃತವಾಗಿದೆ.
ಭದ್ರಾ ಒಳ ಹರಿವೂ ಹೆಚ್ಚಳ : ಭದ್ರಾ ಜಲಾಶಯಕ್ಕೆ ಗುರುವಾರ 26 ಸಾವಿರ ಕ್ಯೂಸೆಕ್ಸ್ ಇದ್ದ ಒಳ ಹರಿವು ಶುಕ್ರವಾರ ಸಂಜೆ 40 ಸಾವಿರ ಕ್ಯೂಸೆಕ್ಸ್ ಗೆ ಏರಿಕೆ ಕಂಡಿದೆ ಎನ್ನಲಾಗಿದೆ.
ಶುಕ್ರವಾರ ಸಂಜೆ ಜಲಾಶಯದ ನೀರಿನ ಮಟ್ಟ 176 ಅಡಿ ದಾಟಿದ್ದು, ಕಳೆದ ವರ್ಷಕ್ಕಿಂತ 21 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 155 ಅಡಿ ನೀರಿತ್ತು. ಜಲಾಶಯದ ಗರಿಷ್ಟ ಮಟ್ಟ 186 ಅಡಿಗಳಾಗಿದ್ದು, ಜಲಾಶಯ ಭರ್ತಿಗೆ 10 ಅಡಿ ಮಾತ್ರ ಬಾಕಿ ಇದೆ.
ನದಿಗೆ ನೀರು ಸಾಧ್ಯತೆ : ಭದ್ರಾ ಒಳ ಹರಿವು ಹೆಚ್ಚಾಗುತ್ತಿರುವ ಕಾರಣ ಜಲಾಶಯ ಭರ್ತಿಗೆ ಕ್ಷಣ ಗಣನೆ ಆರಂಭವಾಗಿದೆ.
ಜಲಾಶಯದ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಯುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಭದ್ರಾ ಅಧೀಕ್ಷಕ ಇಂಜಿನಿಯರ್ ಸುಜಾತ ತಿಳಿಸಿದ್ದಾರೆ.