ಕಾರ್ಗಿಲ್ ವಿಜಯೋತ್ಸವದಲ್ಲಿ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್
ದಾವಣಗೆರೆ, ಜು. 26 – ನಗರದ ಎಂಸಿಸಿ `ಬಿ’ ಬ್ಲಾಕ್ನಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ವಿಜಯೋತ್ಸವ ನೇತೃತ್ವ ವಹಿಸಿದ್ದ ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತವು ದಿಗ್ವಿಜಯ ಸಾಧಿಸಿದ ದಿನ. ಈ ದಿನ ದೇಶವೇ ಹಬ್ಬದ ದಿನದಂತೆ ಆಚರಿಸುತ್ತದೆ. ಅನೇಕ ಯೋಧರು ತಮ್ಮ ತ್ಯಾಗ, ಬಲಿದಾನದಿಂದ ಯುದ್ಧದಲ್ಲಿ ಗೆದ್ದಿದ್ದಾರೆ. ಅವರೆಲ್ಲರನ್ನೂ ಸ್ಮರಿಸಿಕೊಳ್ಳುವ ದಿನ. ಪ್ರತಿಯೊಬ್ಬರೂ ಹುತಾತ್ಮರಾದವರಿಗೆ ಗೌರವಪೂರ್ವಕವಾಗಿ ನಮನ ಸಲ್ಲಿಸೋಣ ಎಂದು ಹೇಳಿದರು.
ಭಾರತದ ವಿರುದ್ಧ ಯುದ್ಧ ಸಾರಿದ ಪಾಕ್ಗೆ ತಕ್ಕ ಪಾಠ ಕಲಿಸಿದ ದಿನ. 1999ರಲ್ಲಿ ನಡೆದ ಈ ಯುದ್ಧ ಭಾರತೀಯ ಸೇನೆಯ ಸ್ವಾಭಿಮಾನ ಪ್ರಶ್ನಿಸುವ ವಿಷಯವಾಗಿತ್ತು. ನೂರಾರು ಸೈನಿಕರು ಹುತಾತ್ಮರಾದರೂ ಅಳುಕದೇ ಮುನ್ನುಗ್ಗಿ ಯೋಧರು ದೇಶದ ಗಡಿ ಸಂರಕ್ಷಿಸುವ ಮೂಲಕ ರಾಷ್ಟ್ರದ ಸೇನೆಯ ಶಕ್ತಿ ವಿಶ್ವಕ್ಕೆ ಗೊತ್ತಾಗುವಂತಾಯಿತು ಎಂದು ಅವರು ಯೋಧರನ್ನು ಸ್ಮರಿಸಿದರು.
ದೇಶದ ಸಾರ್ವಭೌಮತೆಗೆ ಧಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕು. ದೇಶದ ಪ್ರತಿಷ್ಠೆ, ಆಂತರಿಕ ವಿಚಾರ, ಭದ್ರತೆ ವಿಚಾರದಲ್ಲಿ ಎಂದಿಗೂ ರಾಜಿ ಆಗುವುದು ಬೇಡ. ವೀರ ಯೋಧರ ಧೈರ್ಯ, ಸಾಹಸ, ತ್ಯಾಗ, ಹೋರಾಟ ಬಲಿದಾನದಿಂದಾಗಿ ಯುದ್ಧದಲ್ಲಿ ಜಯಶಾಲಿ ಆಗಿದ್ದೂ ದೇಶದ ಶಕ್ತಿಯು ಏನೆಂಬುದು ಸಾಬೀತಾಗಿತ್ತು ಎಂದು ತಿಳಿಸಿದರು.