ಹರಿಹರದಲ್ಲಿನ `ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮದಲ್ಲಿ ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ
ಹರಿಹರ, ಜು.26- ಜಮಾತೆ ಇಸ್ಲಾಂ ಹಿಂದ್ ಹರಿಹರ ಘಟಕದಿಂದ ಸ್ಥಳೀಯ ಪ್ರಶಾಂತ ನಗರದ ಮಸ್ಜಿದ್ – ಎ – ಅಲಿ ಮಸೀದಿಯಲ್ಲಿ ಇಂದು ಆಯೋಜಿಸಿದ್ದ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯಿತು.
ಮಧ್ಯಾಹ್ನ 12.30ಕ್ಕೆ ಶುಕ್ರವಾರದ ವಿಶೇಷ ಪ್ರವಚನ ಹಾಗೂ ನಮಾಜ್‌ಗೆಂದು ಅಜಾನ್ ಕೂಗಿದ ನಂತರ ಎಂದಿನಂತೆ ಮುಸ್ಲಿಂ ಸಮುದಾಯ ದವರು ಮಸೀದಿಗೆ ಬಂದರು. ಜೊತೆಗೆ ಹಿಂದೂ ಬಾಂಧವರೂ ಕೂಡ ಮಸೀದಿಯನ್ನು ಪ್ರವೇಶಿಸಿ, ಕನ್ನಡ ಭಾಷೆಯಲ್ಲಿ ನಡೆದ ವಿಶೇಷ ಪ್ರವಚನವನ್ನು ಆಲಿಸಿದರು.
ಜಗತ್ತಿನಲ್ಲಿರುವ ಎಲ್ಲಾ ವ್ಯಕ್ತಿಗಳು ಪರಸ್ಪರ ಸಹೋದರತ್ವದಿಂದ ಬದುಕಬೇಕು. ದೇವರನ್ನು ನಾವು ಅಲ್ಲಾಹ ಎಂದು ಕರೆದರೆ ಇನ್ನೊಂದು ಧರ್ಮೀಯರು ಇನ್ನೊಂದು ಹೆಸರಲ್ಲಿ ಗುರುತಿಸು ತ್ತಾರೆ. ಪರಸ್ಪರರ ಧಾರ್ಮಿಕ ಕೇಂದ್ರಗಳಿಗೆ, ನಿಯಮಿತವಾಗಿ ಭೇಟಿ ನೀಡಿದರೆ ಸಾಮರಸ್ಯ, ಸ್ನೇಹ, ವಿಶ್ವಾಸ ಬೆಳೆಯುತ್ತದೆ ಎಂದು ಪ್ರವಚನ ನೀಡಿದ ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ತಿಳಿಸಿದರು.
`ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮ ಈಗಿನ ವಾತಾವರಣಕ್ಕೆ ಅಗತ್ಯವಿತ್ತು. ಮಸೀದಿಯೊಳಗೆ ನಡೆಯುವ ಪ್ರವಚನ, ನಮಾಜು ಮಾಡುವ ರೀತಿ – ನೀತಿಗಳನ್ನು ನೋಡಲು ಅವಕಾಶ ಸಿಕ್ಕಿತು ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ.ಜೆ.ಮುರುಗೇಶಪ್ಪ ಹೇಳಿದರು.
ವಿವಿಧತೆಯಲ್ಲಿ ಏಕತೆಯ ಸಂಕೇತ ಭಾರತ. ಇಲ್ಲಿರುವ ವಿವಿಧ ಧರ್ಮ, ಜಾತಿ, ಜನಾಂಗದವರು ಸಾಮರಸ್ಯದಿಂದ ಬದುಕಿದರೆ, ಅದೇ ದೇಶದ ಶಕ್ತಿ, ಆಗ ಭಾರತ ಜಾಗತಿಕ ಶಕ್ತಿಯಾಗಿ ಬೆಳೆಯಲು ಸಾಧ್ಯ, ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆಂದು ಹಿರಿಯ ಕಾರ್ಮಿಕ ಮುಖಂಡ ಹೆಚ್.ಕೆ.ಕೊಟ್ರಪ್ಪ ಹೇಳಿದರು.
ಹೊರ ಭಾಗದಿಂದ ಮಾತ್ರ ನೋಡುತ್ತಿದ್ದ ಮಸೀದಿಯನ್ನು ಇಂದು ಒಳಗೆ ಬಂದು ನೋಡುವ ಅವಕಾಶ ಸಿಕ್ಕಿತು. ಜೊತೆಗೆ ಮೌಲಾನಾರವರು ಮಾಡುವ ಪ್ರವಚನವನ್ನು ಕನ್ನಡ ಭಾಷೆಯಲ್ಲಿಯೇ ಕೇಳಿದೆವು. ಎಲ್ಲಾ ಧರ್ಮೀಯರು ಅಣ್ಣ, ತಮ್ಮಂದಿ ರಂತೆ ಬದುಕಿದರೆ ಮಾತ್ರ ಎಲ್ಲರಿಗೂ ಒಳ್ಳೆಯದಾ ಗುತ್ತದೆ ಎಂದು ಗೃಹಿಣಿ ಮಂಜುಳ ಹೇಳಿದರು.
ಬಿಜೆಪಿ ಮುಖಂಡ ಪರಶುರಾಮ ಕಾಟ್ವೆ, ಹರಿಹರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎ.ಕೆ.ಭೂಮೇಶ್, ಸುರೇಶ್, ಮಂಜುನಾಥ್ ಎಸ್., ಗಿರೀಶ್, ಕಾವ್ಯ, ಸುಮಂಗಲ, ಬಸವಲಿಂಗಮ್ಮ, ಜಮಾತೆ ಇಸ್ಲಾಂ ಇ ಹಿಂದ್ ಹರಿಹರ ಘಟಕದ ಅಧ್ಯಕ್ಷ ಅಬ್ದುಲ್ ಖಯೂಂ ಎಕ್ಕೇಗೊಂದಿ, ಮಸೀದಿಯ ಅಧ್ಯಕ್ಷ ಡಾ.ಗುಲಾಂ ನಬಿ, ಆರ್.ಸಿ.ಉಬೇದ್ ಉಲ್ಲಾ, ಸೈಯದ್ ರಿಯಾಜ್ ಅಹ್ಮದ್, ಅಬ್ದುಲ್ ಸಲಾಂ, ಇಖ್ರಾ ಅಕಾಡೆಮಿ ಶಾಲೆ ಮುಖ್ಯಸ್ಥ ಅಬ್ದುಲ್ ರೆಹಮಾನ್, ಫಾರೂಖ್ ಖಾನ್, ಡಾ.ನಜೀಬ್ ಉಲ್ಲಾ ಖಾನ್, ಉಸ್ಮಾನ್ ಖಾನ್, ಅದ್ನಾನ್ ಸಾಖಿಬ್ ಎಕ್ಕೆಗೊಂದಿ, ಮುಸೇಬ್ ಅನಸ್ ಅಫ್ಜಲ್ ಹುಸೇನ್, ಅಬ್ದುಲ್ ರಹೀಂ ಇದ್ದರು.