ದಾವಣಗೆರೆ, ಜು. 25- ಆಗಸ್ಟ್ 5 ಅಥವಾ 6 ರಂದು ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು, ತದನಂತರ ನಾಲೆಗೆ ನೀರು ಹರಿಸಲು ತೀರ್ಮಾನಿಸಬೇಕು ಎಂದು ನಿನ್ನೆ ನಡೆದ ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಶಾಸಕರು ಸಚಿವರು ಚರ್ಚಿಸಿರುವುದು ದುರ್ದೈವ ಸಂಗತಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರೈತ ಮುಖಂಡ ಧನಂಜಯ್ ಕಡ್ಲೇಬಾಳು ಖಂಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಡ್ಯಾಂ ನೀರಿನ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿದೆ. ನೀರಿನ ಮಟ್ಟ ಇಂದು ಬೆಳಿಗ್ಗೆ 6 ಗಂಟೆಗೆ 171 ಅಡಿ 6 ಇಂಚು ಇದ್ದು, 26044 ಕ್ಯೂಸೆಕ್ ಒಳಹರಿವು ಇದೆ. ಇಂದು ಒಳಹರಿವು, 17383 ಕ್ಯೂಸೆಕ್ ಇದ್ದದ್ದು ಇಂದು ಏರಿಕೆಯಾಗಿದೆ. ಡ್ಯಾಂ ತುಂಬುವುದು ಗ್ಯಾರಂಟಿಯಾಗಿದೆ. ರೈತರಲ್ಲಿ ಸಂತಸ ಮನೆ ಮಾಡಿದೆ. ಮೊನ್ನೆ ನಡೆದ ರೈತರ ಸಭೆಯಲ್ಲಿ ಜಿಲ್ಲಾಧಿಕಾರಿಯವರು ಇನ್ನೊಂದೇರಡು ದಿನಗಳಲ್ಲಿ ನಾಲೆಗೆ ನೀರು ಹರಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಇಂದಿನಿಂದ ನೀರು ಹರಿಸಿದ್ರೆ, ಕಳೆದ ಹಂಗಾಮಿನಲ್ಲಿ ಬೀಕರ ಬಿಸಿಲಿನ ತಾಪಮಾನದಿಂದ ಒಣಗಿರುವ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಬಹುದು ಮತ್ತು ರೈತರು ಭತ್ತ ಬೀಜ ಚೆಲ್ಲಲು ಅನುಕೂಲವಾಗುತ್ತದೆ.
ಸಾಮಾನ್ಯವಾಗಿ ಡ್ಯಾಂ ನೀರಿನ ಮಟ್ಟ 186 ಅಡಿ ಪೂರ್ಣ ತುಂಬಲು ಬಿಡುವುದಿಲ್ಲ. ಮುಂಜಾಗ್ರತೆ ಕ್ರಮವಾಗಿ ನೀರಿನ ಮಟ್ಟ 182-183 ಅಡಿ ತಲುಪಿದ ತಕ್ಷಣ ಹೊಳೆಗೆ ಹರಿಸಲಾಗುತ್ತದೆ. ಇದರಿಂದ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಆದ್ದರಿಂದ ಇಂದು ರಾತ್ರಿಯಿಂದ ನಾಲೆಗೆ ನೀರು ಹರಿಸಬೇಕು ಎಂದು ಧನಂಜಯ್ ಅವರು ಆಗ್ರಹಿಸಿದ್ದಾರೆ.