ದಾವಣಗೆರೆ, ಜು. 24 – ಟ್ರ್ಯಾಕ್ಟರ್ ಗಳನ್ನು ವಾಣಿಜ್ಯ ಉಪಯೋಗಕ್ಕೆ ಬಳಕೆ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಜೆಡಿಎಸ್ ಮುಖಂಡ ಎಂ.ಎನ್. ನಾಗರಾಜ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಬ್ಯಾಂಕುಗಳು ನೀಡುವ ಸಾಲದಲ್ಲಿ ಟ್ರ್ಯಾಕ್ಟರ್ ಗಳನ್ನು ಖರೀದಿಸಿ ಅದನ್ನು ವಾಣಿಜ್ಯ ಉಪಯೋಗಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಸಿಮೆಂಟ್, ಮರಳು, ಗ್ರಾನೈಟ್ ಸೇರಿದಂತೆ ಇತರೆ ವಾಣಿಜ್ಯ ವಸ್ತುಗಳನ್ನು ಸಾಗಿಸಲು ಟ್ರ್ಯಾಕ್ಟರ್ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ, ಕರ್ಕಶ ಶಬ್ಧಗಳಿಂದ ಟ್ರ್ಯಾಕ್ಟರ್ ಅನ್ನು ಚಲಿಸಲಾಗುತ್ತಿದೆ ಎಂದು ಅವರು ಉದಾಹರಣೆಗಳೊಂದಿಗೆ ದೂರಿದ್ದಾರೆ.
ರೈತರ ಹೆಸರಿನಲ್ಲಿ ಖಾಸಗಿಯವರು ಬ್ಯಾಂಕ್ ನಲ್ಲಿ ಸಾಲ ಪಡೆದು ಟ್ರ್ಯಾಕ್ಟರ್ ಗಳನ್ನು ಖರೀದಿ ಮಾಡಿ ಈ ವಂಚನೆ ಮಾಡುತ್ತಿದ್ದಾರೆ. ಆರ್.ಟಿ.ಓ. ಅಧಿಕಾರಿಗಳು ಎಚ್ಚರಿಕೆ ವಹಿಸಿ, ಸೂಕ್ತ ತಪಾಸಣೆ ಮಾಡಿದ್ದಲ್ಲಿ ಅನೇಕ ಪ್ರಕರಣಗಳು ಬೆಳಕಿಗೆ ಬರಲಿವೆ ಎಂದು ನಾಗರಾಜ್ ತಿಳಿಸಿದ್ದಾರೆ.