ಹೊರಗುತ್ತಿಗೆ ರದ್ದುಮಾಡಿ

ಹೊರಗುತ್ತಿಗೆ ರದ್ದುಮಾಡಿ

ಶಾಸಕ ಕೆ.ಎಸ್. ಬಸವಂತಪ್ಪ ಆಗ್ರಹ

ಸರ್ಕಾರದಿಂದಲೇ ಪ್ರತಿ ತಿಂಗಳ ವೇತನ ಪಾವತಿಗೆ ಮನವಿ

ದಾವಣಗೆರೆ, ಜು. 24 – ದಾವಣಗೆರೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಡಿ ದರ್ಜೆ ನೌಕರರಿಗೆ ಗುತ್ತಿಗೆದಾರರು ಸರಿಯಾಗಿ ವೇತನ, ವಿವಿಧ ಸೌಲಭ್ಯ ನೀಡದೆ ಹಗಲು ದರೋಡೆ ಮಾಡುತ್ತಿದ್ದಾರೆ. ಈ ಹೊರ ಗುತ್ತಿಗೆ ರದ್ದು ಮಾಡಿ ಸರ್ಕಾರ ದಿಂದಲೇ ನೇರವಾಗಿ ಅವರ ಖಾತೆಗೆ ಪ್ರತಿ ತಿಂಗಳು ವೇತನ ಪಾವತಿ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್‌. ಬಸವಂತಪ್ಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಬುಧವಾರ ವಿಧಾನಸಭಾದಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಈ ವಿಷಯ ಪ್ರಸ್ತಾಪ ಮಾಡಿದ ಶಾಸಕ ಕೆ.ಎಸ್. ಬಸವಂತಪ್ಪ, ಸರ್ಕಾರಿ ಆಸ್ಪತ್ರೆ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಎಪಿಎಂಸಿ ಹಾಗೂ ಆಸ್ಪತ್ರೆಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರಿಗೆ ಗುತ್ತಿಗೆದಾರರು ಪ್ರತಿ ತಿಂಗಳು ವೇತನ ಕೊಡುತ್ತಿಲ್ಲ. ಕಾರ್ಮಿಕ ಕಾಯ್ದೆ ಪ್ರಕಾರ ಪ್ರತಿ ನೌಕರನಿಗೆ 17500 ಸಾವಿರ ರೂ. ವೇತನ ಕೊಡಬೇಕು. ಆದರೆ ಗುತ್ತಿಗೆ ಪಡೆದ ಗುತ್ತಿಗೆದಾರ ಮತ್ತು ಅಧಿಕಾರಿಗಳು ಶಾಮಿಲು ಆಗಿ  ಒಬ್ಬ ನೌಕರನಿಗೆ ತಿಂಗಳಿಗೆ 10 ಸಾವಿರ ಕೊಡುತ್ತಾರೆ. ಕೊಟ್ಟರೂ ಸಮಯಕ್ಕೆ ಸರಿಯಾಗಿ ಕೊಡುವುದಿಲ್ಲ. ಸರಿಯಾಗಿ ಇಎಸ್ ಐ, ಪಿಎಫ್ ಕಟ್ಟುತ್ತಿಲ್ಲ. ಇದರಿಂದ ನೌಕರರಿಗೆ ಅನಾರೋಗ್ಯದಿಂದ ಬಳಲಿ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಪರದಾಡುತ್ತಾರೆ. ಸಕಾಲಕ್ಕೆ ಚಿಕಿತ್ಸೆ ಸಿಗದೆ ಕೆಲವು ನೌಕರರು ಜೀವ ಕಳೆದುಕೊಂಡ ಉದಾಹರಣೆಗಳು ಇವೆ. ಇದು ದಾವಣಗೆರೆ ಜಿಲ್ಲೆಯದಷ್ಟೇ ಸಮಸ್ಯೆಯಲ್ಲ, ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪ್ರತಿಯೊಬ್ಬ ಡಿ ದರ್ಜೆ ನೌಕರರ ಸಮಸ್ಯೆಯಾಗಿದೆ. ಕೂಡಲೇ ಸರ್ಕಾರ, ಹಾರನಹಳ್ಳಿ ರಾಮಸ್ವಾಮಿ ಅವರ ವರದಿ ತಿರಸ್ಕರಿಸಿ,  ಹೊರ ಗುತ್ತಿಗೆ ರದ್ದು ಮಾಡಿ  ಕಾರ್ಮಿಕ ಕಾಯ್ದೆಯಂತೆ ವೇತನವನ್ನು  ನೇರವಾಗಿ ಅವರ ಖಾತೆಗೆ  ಪಾವತಿ ಮಾಡುವ ಕುರಿತು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. 

ಶಾಸಕ ಕೆ.ಎಸ್. ಬಸವಂತಪ್ಪ ಪ್ರಸ್ತಾಪಿಸಿ ವಿಷಯಕ್ಕೆ ಶಾಸಕ ಮಹಾಂತೇಶ ಕೌಜಲಗಿ ಸೇರಿದಂತೆ ಬಹುತೇಕ ಶಾಸಕರು ಧ್ವನಿ ಗೂಡಿಸಿ, ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಗುತ್ತಿಗೆದಾರರು ಹೊರ ಗುತ್ತಿಗೆ ನೌಕರರಿಗೆ ವೇತನ, ಭವಿಷ್ಯ ನಿಧಿ, ಇಎಸ್‌ಐ ಸೇರಿದಂತೆ ವಿವಿಧ ಸೌಲಭ್ಯ ಸರಿಯಾಗಿ ಕೊಡುತ್ತಿಲ್ಲ ಎಂಬ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸೂಕ್ತ ದಾಖಲೆ ಕೊಟ್ಟರೆ ಆ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಂದು ಸೊಸೈಟಿ ಸ್ಥಾಪಿಸಿ ಜಿಲ್ಲಾಧಿಕಾರಿಗಳ  ಮೂಲಕ ನೇರವಾಗಿ ಅವರ ಖಾತೆಗೆಗಳಿಗೆ ವೇತನ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸಲು ಚಿಂತನೆ ಮಾಡಲಾಗಿದೆ. ಈಗಾಗಲೇ ಬೀದರ್  ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ವಿಸ್ತರಿಸಿ ಪ್ರತಿ ತಿಂಗಳು ಅವರಿಗೆ ವೇತನ ಪಾವತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯದ ನಗರಸಭೆ, ಪುರಸಭೆ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರಕಾರ್ಮಿಕರನ್ನು ಖಾಯಂಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೇ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದ ಶಾಸಕ ಬಸವಂತಪ್ಪ, ಮಹಾನಗಪಾಲಿಕೆಯಲ್ಲಿ ಇನ್ನು ಕೆಲ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿದ್ದು, ಅವರನ್ನು ಕೂಡ ಖಾಯಂಗೊಳಿಸಬೇಕು. ಅದೇ ರೀತಿಯಲ್ಲಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಡಿ ದರ್ಜೆ ನೌಕರರನ್ನು ಖಾಯಂಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಅಥವಾ ನೇರವಾಗಿ ಅಚರ ಖಾತೆಗೆ ವೇತನ ಪಾವತಿಸುವ ವ್ಯವಸ್ಥೆ ಮಾಡಬೇಕೆಂದು  ಶಾಸಕ ಬಸವಂತಪ್ಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

error: Content is protected !!