ಹಣ ದುರುಪಯೋಗ ಪ್ರಕರಣ ಬಸವರಾಜನ್ ದೋಷಮುಕ್ತ

ಹಣ ದುರುಪಯೋಗ ಪ್ರಕರಣ ಬಸವರಾಜನ್ ದೋಷಮುಕ್ತ

ಬೆಂಗಳೂರು, ಜು. 24 – ಚಿತ್ರದುರ್ಗ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಅವರಿಗೆ ಹಣ ದುರುಪಯೋಗ ಆರೋಪದ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಕ್ಲೀನ್‌ಚಿಟ್ ನೀಡಿದೆ.

ಶ್ರೀ ಶಿವಮೂರ್ತಿ ಮುರುಘಾ ಶರಣರು ಬಸವರಾಜನ್ ವಿರುದ್ಧ ದಾಖಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಇಲ್ಲಿನ‌ ಜನ‌ಪ್ರತಿನಿಧಿಗಳ ವಿಶೇಷ‌ ನ್ಯಾಯಾಲಯವು, ಬಸವರಾಜನ್ ಅವರನ್ನು ದೋಷಮುಕ್ತಗೊಳಿಸಿದೆ.

ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಬಸವರಾಜನ್ ಅವರನ್ನು ಬಿಡುಗಡೆ‌‌ ಮಾಡಲು ನ್ಯಾಯಾಲಯ ಬುಧವಾರ ಆದೇಶಿಸಿದೆ ಎಂದು ಅವರ ಪರ ವಕೀಲರಾದ ಹೆಚ್.ವಿ.ರಾಮದಾಸ್ ಹೇಳಿದ್ದಾರೆ.

ಬಸವರಾಜನ್ ಅವರು ಶ್ರೀಮಠದ ಅಡಳಿತಾಧಿಕಾರಿಯಾಗಿದ್ದಾಗ ಮಠದ ಎಸ್.ಬಿ‌. ಖಾತೆಯಿಂದ ಈಶ್ವರ ನಾಯ್ಕ ಎಂಬುವವರಿಗೆ ಮಠದ ಕಾರ್ಯಗಳಿಗೆ ಸಂಬಂಧಿಸಿದಂತೆ  2.5 ಲಕ್ಷ‌ ರೂ.ಗಳ ಚೆಕ್ ನೀಡಿದ್ದರು. ಇದಾದ ಹಲವು ವರ್ಷಗಳ ನಂತರ ಈಶ್ವರ ನಾಯ್ಕ ಅವರಿಂದ ಬಸವರಾಜನ್ ಅವರು ಆಸ್ತಿಯೊಂದನ್ನು ಖರೀದಿಸಿದ್ದರು. 

ಬಸವರಾಜನ್ ಅವರು ಈಶ್ವರ‌ನಾಯ್ಕ ಅವರಿಗೆ‌ ಮಠದ ಹಣ ನೀಡಿ ವೈಯಕ್ತಿಕವಾಗಿ ಆಸ್ತಿ ಖರೀದಿಸಿ ಮಠಕ್ಕೆ ವಂಚಿಸಿದ್ದಾರೆಂದು ವಂಚನೆ ಪ್ರಕರಣ ದಾಖಲಿಸಲಾಗಿತ್ತು. ನಂತರ ಪ್ರಕರಣ ಜನ ಪ್ರತಿನಿಧಿಗಳ ವಿಶೇಷ ‌ನ್ಯಾಯಾಲಯಕ್ಕೆ‌ ವರ್ಗಾವಣೆಯಾಗಿತ್ತು.

error: Content is protected !!