ಸಮಾಜದಲ್ಲಿ ಮೌಢ್ಯತೆಯನ್ನು ಹೋಗಲಾಡಿಸಿ, ವೈಚಾರಿಕತೆ ಬಿತ್ತಬೇಕು

ಸಮಾಜದಲ್ಲಿ ಮೌಢ್ಯತೆಯನ್ನು ಹೋಗಲಾಡಿಸಿ, ವೈಚಾರಿಕತೆ ಬಿತ್ತಬೇಕು

ಹರಿಹರ, ಜು. 24 –  ಬಿಸಿಯೂಟ ತಯಾರಕ ಕಾರ್ಮಿಕರು, ಸಮಾಜದಲ್ಲಿನ ಮೌಢ್ಯತೆ ಹೋಗಲಾಡಿಸಿ, ವೈಚಾರಿಕತೆ ಬಿತ್ತುವ ಕೆಲಸ ಮಾಡಬೇಕು ಎಂದು‌ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕರೂ, ನಿವೃತ್ತ ಪ್ರಾಧ್ಯಾಪಕರೂ ಆದ ಪ್ರೊ. ಎ.ಬಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ನಗರದ ಬೈಪಾಸ್ ಬಳಿ ಇರುವ ಮೈತ್ರಿವನದಲ್ಲಿ ಜಿಲ್ಲಾ ಅಕ್ಷರ ದಾಸೋಹ ತಯಾರಕರ ಸಂಘದ ವತಿಯಿಂದ ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಮಾಜದ ತಳಮಟ್ಟದಲ್ಲಿ ಕೆಲಸ ಮಾಡುವ ಅಡುಗೆ ತಯಾರಕರು  ಹಸಿವು,  ಅಪಮಾನ, ಅವಮಾನ ಅನುಭವಿಸುತ್ತಿದ್ದರೂ, ಮಕ್ಕಳಿಗೆ ಶುಚಿ-ರುಚಿಯಾದ ಊಟವನ್ನು ಉಣಬಡಿಸುತ್ತಿದ್ದು, ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಉನ್ನತ ಸ್ಥಾನಕ್ಕೇರುವಂತೆ ಮಾಡುವ ಮೂಲಕ ವೃತ್ತಿ ಜೀವನದಲ್ಲಿ ಅನುಭವಿಸಿದ ಅಪಮಾನ, ಅವಮಾನಕ್ಕೆ ಉತ್ತರ ನೀಡುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಹೆಚ್.ಕೆ.ರಾಮಚಂದ್ರಪ್ಪ ಮುಂತಾದ ಅನೇಕ ಹಿರಿಯ ಕಾರ್ಮಿಕ ಧುರೀಣರು ದುಡಿಯುವ ಮಹಿಳೆಯರ ನಾಯಕರಾಗಿ ಹಲವಾರು ವರ್ಷ ಹೋರಾಟ ಮಾಡಿದ್ದಾರೆ. ಆ ಹೋರಾಟದ ಪರಂಪರೆಯನ್ನು ಇಂದಿನ ಯುವಕರು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲ್ಯಾಘನೀಯ ಕಾರ್ಯ ಎಂದರು.

ಬಿಸಿಯೂಟ ತಯಾರಕರು ನಿಜಕ್ಕೂ ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ‌. ಆದ್ದರಿಂದ ಅವರ ಈ ಜಿಲ್ಲಾ ಸಮ್ಮೇಳನಕ್ಕೆ  ಸತೀಶ್ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆಯು ನೆರವು ನೀಡಿದೆ. ದುಡಿಯುವ ಮಹಿಳೆಯರ ಹಿತ ಕಾಪಾಡಬೇಕಾದದ್ದು ಸರ್ಕಾರ ಮತ್ತು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ, ರಾಜ್ಯದಲ್ಲಿ 1,20,000 ಬಿಸಿಯೂಟ ತಯಾರಕರು ಮತ್ತು ಸಹಾಯಕಿಯರು ಇದ್ದಾರೆ. ಅತ್ಯಂತ ಕಡಿಮೆ ಮೊತ್ತದ 3,700  ರೂ. ಗೌರವಧನ ಪಡೆಯುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಸಾಧ್ಯವಿಲ್ಲ. ಅವರನ್ನು ಸರಕಾರಿ ನೌಕರರು ಎಂದು ಪರಿಗಣಿಸಬೇಕು ಎಂದರು.

ಕಾಂ. ಶೇಖರಪ್ಪ ಸುರೇಶ್, ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಟಿ.ಎಸ್. ನಾಗರಾಜ್ ಧ್ವಜಾರೋಹಣ ಮಾಡುವುದರ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು. 

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್‌ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್‌ಕುಮಾರ್,  ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಹೆಚ್‌.ಜಿ.ಉಮೇಶ್ ಆವರಗೆರೆ, ಹಿರಿಯ ಕಾರ್ಮಿಕ ಮುಖಂಡ ಹೆಚ್‌.ಕೆ.ಕೊಟ್ರಪ್ಪ, ಕಾರ್ಮಿಕ ನಾಯಕ ಮೊಹಮದ್ ಬಾಷಾ,  ರಾಜನಹಳ್ಳಿಯ ವಿಶ್ವಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ರಾಜನಹಳ್ಳಿ ಮಂಜುನಾಥ್, ಇಪ್ಟಾ ಜಿಲ್ಲಾಧ್ಯಕ್ಷ ಐರಣಿ ಚಂದ್ರು, ಕೆ.ಬಾನಪ್ಪ, ಕಾರ್ಮಿಕ ನಾಯಕ ಟಿ.ಹೆಚ್.ನಾಗರಾಜ್, ಎ.ತಿಪ್ಪೇಶಿ, ಜಿಲ್ಲಾ ಬಿಸಿಯೂಟ ತಯಾರಕರ ಫೆಡರೇಶನ್‌ನ ಜಿಲ್ಲಾ ನಾಯಕರುಗಳಾದ ಸರೋಜ, ಮಳಲ್ಕೆರೆ ಜಯಮ್ಮ, ಜ್ಯೋತಿಲಕ್ಷ್ಮಿ, ಪದ್ಮಾ  ದಾವಣಗೆರೆ, ಸಿದ್ದನಮಠ ಗಂಗಾದೇವಿ, ಹರಿಹರ ಮಂಗಳ, ಚನ್ನಮ್ಮ ಜಗಳೂರು, ಹೊನ್ನಾಳಿ ಸರೋಜಮ್ಮ, ರುದ್ರಮ್ಮ ಬೆಳಲಗೆರೆ, ಭಾರತಿ ಜಗಳೂರು, ಗುಳ್ಳೇಹಳ್ಳಿ ಸುಮ ಮುಂತಾದವರು ಉಪಸ್ಥಿತರಿದ್ದರು.

ಮೊಹಮ್ಮದ್ ಬಾಷಾ ಸ್ವಾಗತಿಸಿದರು. ಕೆ.ಬಾನಪ್ಪ ನಿರೂಪಿಸಿದರು. ಮಳಲ್ಕೆರೆ ಜಯಮ್ಮ ವಂದಿಸಿದರು. ಐರಣಿ ಚಂದ್ರು ಹಾಗೂ ಸಂಗಡಿಗರು ಕ್ರಾಂತಿ ಗೀತೆ ಹಾಡಿದರು.

error: Content is protected !!