ಯುವಕರು ಮನುಷ್ಯತ್ವದಿಂದ ದೈವತ್ವದ ಕಡೆಗೆ ಸಾಗಿ

ಯುವಕರು ಮನುಷ್ಯತ್ವದಿಂದ ದೈವತ್ವದ ಕಡೆಗೆ ಸಾಗಿ

ದಾವಣಗೆರೆ, ಜು.23- ಯುವಕರು ಸೋಮಾರಿತನ ದೂರ ತಳ್ಳಿ, ಮನುಷ್ಯತ್ವದಿಂದ ದೈವತ್ವದ ಕಡೆಗೆ ತಲುಪಬೇಕೆಂದು ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ತ್ಯಾಗೀಶ್ವರಾನಂದ ಸ್ವಾಮೀಜಿ ಹೇಳಿದರು.

ವಿದ್ಯಾಸಾಗರ ಶಾಲೆ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಕಲ್ಪ ದಿನಾಚರಣೆ ಮತ್ತು ಕೈ ತುತ್ತು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪಾಲಕರು, ಮಕ್ಕಳನ್ನು ಉತ್ತಮ ಪ್ರಜೆಯಾಗಿಸುವ ಸಂಕಲ್ಪ ತೊಡಬೇಕು. ಈ ನಿಟ್ಟಿನಲ್ಲಿ ಯುವಕರೂ ಸಹ ತಂದೆ-ತಾಯಿ, ಗುರು ಹಿರಿಯರು ಮತ್ತು ದೇಶವನ್ನು ಗೌರವಿಸುವ ಗುಣ ಬೆಳೆಸಿಕೊಂಡು ಆದರ್ಶ ವ್ಯಕ್ತಿಗಳಾಗಬೇಕೆಂದು ಕಿವಿಮಾತು ಹೇಳಿದರು.

ಮೌಲ್ಯಾಧಾರಿತ ಶಿಕ್ಷಣ ಕೇವಲ ಶಾಲೆಯಲ್ಲಿ ಸಿಗುವುದಿಲ್ಲ. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಮನೆಯಲ್ಲಿಯೇ ಸಂಸ್ಕೃತಿ-ಸಂಸ್ಕಾರ ಕಲಿಸಬೇಕು ಎಂದರು.

ಇಂದಿನ ಮಕ್ಕಳಿಗೆ ಮೆರಿಟ್‌ ಶಿಕ್ಷಣದೊಂದಿಗೆ ವ್ಯಕ್ತಿತ್ವ ವಿಕಸನ ಶಿಕ್ಷಣವೂ ಮುಖ್ಯವಾಗಿದೆ. ಆದ್ದರಿಂದ ಮಕ್ಕಳು ಆತ್ಮೀಯತೆ, ಬಾಂಧವ್ಯ ಮತ್ತು ಮಾನವಿಯತೆಯ ಗುಣ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಆಶ್ರಮದ ಶಾಲೆಯಲ್ಲಿ ಬೆಳೆದ ಮಕ್ಕಳು ಉತ್ತಮ ಸಂಸ್ಕಾರದೊಂದಿಗೆ ಓದಿನಲ್ಲಿ ಸಾಧಿಸಿ ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗಿದ್ದಾರೆ ಎಂದು ಹೇಳಿದರು.

ಶಿಕ್ಷಣ ತಜ್ಞ ಜಗನ್ನಾಥ ನಾಡಿಗೇರ ಮಾತನಾಡಿ, ಒಳ್ಳೆಯ ಸಮಾಜ ನಿರ್ಮಾಣವಾಗಲು ಮನುಷ್ಯನಲ್ಲಿ ಮಾನವೀಯ ಮೌಲ್ಯ ಮತ್ತು ಮಾನವೀಯ ಸಂಬಂಧ ಬಹಳ ಮುಖ್ಯ. ಆದರೆ ಇಂದಿನ ದಿನಮಾನಗಳಲ್ಲಿ ಈ ಅಂಶಗಳು ಮರೀಚಿಕೆ ಆಗುತ್ತಿವೆ ಎಂದು ಆತಂಕ ಪಟ್ಟರು.

ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಸಾಧಿಸುವ ಸಂಕಲ್ಪ ತೊಡಬೇಕು. ಈ ನಿಟ್ಟಿನಲ್ಲಿ ಸಂಕಲ್ಪಕ್ಕೆ ದಕ್ಕೆಯಾಗದಂತೆ ದೃಢ ನಿರ್ಧಾರದೊಂದಿಗೆ ಬದುಕಬೇಕು ಎಂದರು.

ಕಾರ್ಯಕ್ರಮದಲ್ಲಿ ಗುರುದೇವ ವಿದ್ಯಾ ಸಮಿತಿಯ ಆರ್‌. ಭರತ್‌ ಸಿಂಗ್‌, ವಿದ್ಯಾಸಾಗರ ಶಾಲೆಯ ಆಡಳಿತಾಧಿಕಾರಿ ಸತ್ಯವತಿ ಸಿಂಗ್‌, ಶಾಲೆಯ ಸಿಬ್ಬಂದಿ, ಪಾಲಕರು ಮತ್ತು ಮಕ್ಕಳಿದ್ದರು.

error: Content is protected !!