ಹೊನ್ನಾಳಿಯ ರಾಜ್‌ಘಾಟ್‌ನಲ್ಲಿ ಅಣಕು ರಕ್ಷಣಾ ಕಾರ್ಯ, ಮಳೆ, ಪ್ರವಾಹ ಎದುರಿಸಲು ಸನ್ನದ್ದವಾಗಿರಲು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ
ಹೊನ್ನಾಳಿ, ಜು. 23 – ಮಲೆನಾಡಿನ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿರುವು ದರಿಂದ ತುಂಗಭದ್ರಾ ನದಿಯಲ್ಲಿ ಹೆಚ್ಚು ನೀರು ಬರಬಹುದೆಂದು ಅಂದಾಜಿಸಿ ನದಿ ಪ್ರವಾಹ ದಿಂದ ಮುಳುಗಡೆಯಾಗುವ ಪ್ರದೇಶದಲ್ಲಿ ಜನ, ಜಾನುವಾರುಗಳ ರಕ್ಷಣೆಗಾಗಿ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಮತ್ತು ತುರ್ತು ಸೇವಾ ಉಪಕರಣಗಳನ್ನು ಸನ್ನದ್ದವಾಗಿಸಲು ಅಣಕು ರಕ್ಷಣಾ ಕಾರ್ಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಕೃತಿ ವಿಕೋಪದಿಂದ ಉಂಟಾಗುವ ಪರಿಸ್ಥಿತಿ ಎದುರಿಸಲು ಸಿದ್ದತೆಗಾಗಿ ಸಭೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಅವರು ಮಂಗಳವಾರ ಹೊನ್ನಾಳಿಯ ರಾಜಘಾಟ್ ಬಳಿ ರಕ್ಷಣಾ ಕಾರ್ಯದ ಅಣಕು ಪ್ರದರ್ಶನ ವೀಕ್ಷಣೆ ಮಾಡಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗ ಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ 2024 ರ ಜನವರಿಯಿಂದ ಜುಲೈ 23 ರ ವರೆಗೆ 263 ಮಿ.ಮೀ ವಾಡಿಕೆಗೆ 371 ಮಿ.ಮೀ ಮಳೆಯಾಗಿದೆ. ಆದರೆ ಮಲೆನಾಡಿನ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ತುಂಗಾ ನದಿಯಿಂದ ನೀರು ಬರುತ್ತಿದ್ದು ಜುಲೈ 20 ರಂದು 96 ಸಾವಿರ ಕ್ಯೂಸೆಕ್ಸ್ ವರೆಗೆ ನದಿಯ ಮಟ್ಟ ತಲುಪಿತ್ತು. ಜುಲೈ 23 ರಂದು 33686 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು ಭದ್ರಾ ಜಲಾಶಯದಲ್ಲಿ 168.2 ಅಡಿ ನೀರಿನ ಮಟ್ಟ ಇದ್ದು ಇದು ಭರ್ತಿಯಾಗಲು ಇನ್ನೂ 19.8 ಅಡಿ ನೀರು ಬರಬೇಕಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯಾಗಬಹುದಾಗಿದ್ದು ಭದ್ರಾ ಜಲಾಶಯ ಭರ್ತಿಯಾದಲ್ಲಿ ನದಿಯಲ್ಲಿ ಹೆಚ್ಚಿನ ನೀರಿನ ಹರಿವು ಉಂಟಾಗಲಿದೆ. ಇದರಿಂದ ಕೆಲವು ಕಡೆ ಜನರಿಗೆ ಸಮಸ್ಯೆಯಾಗಲಿದೆ ಎಂದರು.
ಹೊನ್ನಾಳಿಯ ರಾಜ್‌ಘಾಟ್ ಹಾಗೂ ಬಂಬೂ ಬಜಾರ್ ಬಳಿ 28 ಕುಟುಂಬಗಳ 125 ಜನರಿಗೆ ಕಾಳಜಿ ಕೇಂದ್ರವನ್ನು ಅಂಬೇಡ್ಕರ್ ಭವನದಲ್ಲಿ ಪ್ರಾರಂಭಿಸಲು, ಹರಿಹರದ ಗಂಗಾನಗರ ಮತ್ತು ಬೆಂಕಿ ನಗರದಲ್ಲಿ 16 ಕುಟುಂಬಗಳ 64 ಜನರಿಗಾಗಿ ಎಪಿಎಂಸಿ ಭವನದಲ್ಲಿ ಮತ್ತು ತೀವ್ರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ತೊಂದರೆಯಾಗುವ ಗ್ರಾಮಗಳ ಕುಟುಂಬಗಳನ್ನು ಗುರುತಿಸಿ ಮುಂಜಾಗ್ರತೆಯಾಗಿ ಎಲ್ಲೆಲ್ಲಿ ಕಾಳಜಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ತೆರೆಯಬಹು ದೆಂದು ಗುರುತು ಮಾಡಲಾಗಿದೆ ಎಂದರು.
ತುರ್ತು ಪರಿಹಾರ: ಮಳೆಯಿಂದ ಮನೆ ಹಾನಿಯಾದಲ್ಲಿ ಪೂರ್ಣ ಹಾನಿಯಾದರೆ ರೂ.1.20 ಲಕ್ಷ, ಹಾನಿ, ಭಾಗಶಃ ಹಾನಿಯಾದಲ್ಲಿ 6 ಸಾವಿರ ಮತ್ತು 4500 ಮತ್ತು ತುರ್ತು ಪರಿಹಾರವಾಗಿ ರೂ.2500 ಗಳ ಪರಿಹಾರ ನೀಡಲಾಗುತ್ತದೆ. ಇಲ್ಲಿಯವರೆಗೆ 91 ಮನೆಗಳಿಗೆ ಭಾಗಶಃ ಹಾಗೂ 3 ಮನೆಗಳಿಗೆ ಪೂರ್ಣ ಹಾನಿ ಪರಿಹಾರ ವಿತರಣೆ ಮಾಡಲಾಗಿದೆ. ಮಳೆಯಿಂದ ಬೆಳೆಗಳಿಗೆ ಹಾನಿಯಾದಲ್ಲಿ ತಕ್ಷಣವೇ ಕಂದಾಯ ಇಲಾಖೆ ಹಾಗೂ ಕೃಷಿ, ತೋಟಗಾರಿಕೆ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಸಿ, ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.
ಶಾಲೆ, ಅಂಗನವಾಡಿ ಸೋರುವಿಕೆ ತಡೆಗೆ ಕ್ರಮ; ಮಳೆಯಿಂದ ಶಾಲಾ ಮತ್ತು ಅಂಗನವಾಡಿ ಕೇಂದ್ರಗಳ ಛಾವಣಿ ಸೋರುತ್ತಿದ್ದಲ್ಲಿ, ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹೊದಿಕೆಯನ್ನು ಅಳವಡಿಸಲು ಸೂಚನೆ ನೀಡಲಾಗಿದೆ. ಕಟ್ಟಡಗಳು ಶಿಥಿಲವಾಗಿದ್ದಲ್ಲಿ ಮಳೆ ಬಂದಾಗ ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರ ಅಥವಾ ತಕ್ಷಣ ದುರಸ್ತಿಗೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದರು.
ಆರೋಗ್ಯ, ನೈರ್ಮಲ್ಯಕ್ಕೆ ಸೂಚನೆ; ಮಳೆಯಿಂದ ಹೊಸ ನೀರು ಬರಬಹುದು, ಇಂತಹ ಸಂದರ್ಭದಲ್ಲಿ ಶುದ್ದ ಕುಡಿಯುವ ನೀರು ಅಥವಾ ಕಾಯಿಸಿದ ನೀರನ್ನು ಮಾತ್ರ ಬಳಕೆ ಮಾಡಬೇಕು. ಮತ್ತು ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ಮಳೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಆರೋಗ್ಯ ಇಲಾಖೆಯಿಂದ ಆಸ್ಪತ್ರೆಗಳಲ್ಲಿ ಔಷಧ ದಾಸ್ತಾನಿಟ್ಟು ಜನರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ತಿಳಿಸಿ, ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಿಂದ ಸ್ವಚ್ಚತೆ ಕಾಪಾಡಲು ಮತ್ತು ಜನರಿಗೆ ಜಾಗೃತಿ ಮೂಡಿಸಲು ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ತಹಶೀಲ್ದಾರ್ ಪಟ್ಟರಾಜೇಗೌಡ, ಉಪವಿಭಾಗಾಧಿಕಾರಿ ಅಭಿಷೇಕ್, ನ್ಯಾಮತಿ ತಹಶೀಲ್ದಾರ್ ಗೋವಿಂದಪ್ಪ, ಜಗಳೂರು ತಹಶೀಲ್ದಾರ್ ಸೈಯ್ಯದ್ ಖಾನ್, ಹೊನ್ನಾಳಿ ಇಒ ಹೆಚ್ ರಾಘವೇಂದ್ರ, ಗ್ರೇಡ್ 2 ತಹಶೀಲ್ದಾರ್ ಸುರೇಶ್ ನಾಯಕ್, ಉಪತಹಶೀಲ್ದಾರ್ ಚಂದ್ರಪ್ಪ, ಕೆಇಬಿ ಜಯಪ್ಪ ,ಡಿಎಚ್ಒ ಷಣ್ಮುಖಪ್ಪ, ಟಿಹೆಚ್‌ಒ ಗಿರೀಶ್, ಕೃಷಿ ಸಹಾಯಕ ನಿರ್ದೇಶಕಿ ಪ್ರತಿಮಾ, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ಸಿಡಿಪಿಓ ಜ್ಯೋತಿ ,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಹೆಚ್ಎಲ್ ಉಮಾ, ಪುರಸಭೆ ಮುಖ್ಯ ಅಧಿಕಾರಿ ಲೀಲಾವತಿ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಎಡ್ಬಲಿ ಸೋಮಲಾ ನಾಯ್ಕ್, ಪಿಡಿಒ ಕಣ್ವಪ್ಪ, ಸಿಡಿಪಿಒ ನವೀನ್ ಕುಮಾರ್, ಬಿಸಿಎಂ ಇಲಾಖೆ ಮೃತ್ಯುಂಜಯ, ಆರ್ ಎಫ್ ಷಣ್ಮುಖ, ಕಿಶೋರ್ ನಾಯಕ್, ಜಿಲ್ಲಾ ಪಂಚಾಯತ್ ಎಡ್ಬಲಿ ಮೋತಿಲಾಲ್, ಇಂಜಿನಿಯರ್ ಮಂಜುನಾಥ್ ಸೇರಿದಂತೆ ತಾಲ್ಲೂಕಿನ ಅಧಿಕಾರಿಗಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.