ರಸ್ತೆ ದುರಸ್ತಿಗೆ ಕರವೇ – ಆಟೋ ಚಾಲಕರ ಪ್ರತಿಭಟನೆ

ರಸ್ತೆ ದುರಸ್ತಿಗೆ ಕರವೇ – ಆಟೋ ಚಾಲಕರ ಪ್ರತಿಭಟನೆ

ಹರಿಹರ, ಜು.23- ನಗರದ ಹೈಸ್ಕೂಲ್ ಬಡಾವಣೆ 15 ಹಾಗೂ 21ನೇ   ವಾರ್ಡ್ ಮಧ್ಯದಲ್ಲಿ ಹಾದು ಹೋಗಿರುವ ರಾಜ ಕಾಲುವೆ ರಸ್ತೆ ದುರಸ್ತಿ, ಸೇತುವೆ ತಡೆಗೋಡೆ ನಿರ್ಮಾಣ, ಮತ್ತು ಚರಂಡಿ ದುರಸ್ತಿ ಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಮತ್ತು ಆಟೋ ಮಾಲೀಕರ ಮತ್ತು ಚಾಲಕರ ಸಂಘಟನೆ ವತಿಯಿಂದ ರಸ್ತೆಗೆ ಬೈಕ್, ಆಟೋ ಅಡ್ಡ ನಿಲ್ಲಿಸಿ ಇಂದು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ   ರಕ್ಷಣಾ ವೇದಿಕೆಯ ಮುಖಂಡ ರಾದ ರಮೇಶ್ ಮಾನೆ, ಪ್ರೀತಂ ಬಾಬು, ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಮಾತನಾಡಿ,   ರಾಜ ಕಾಲುವೆ ರಸ್ತೆ ಸಂಪೂರ್ಣ ಹಾಳಾಗಿದೆ. ಅನೇಕ ಕಡೆಗಳಲ್ಲಿ ಗುಂಡಿಗಳು ಇದ್ದು,  ಅಪಘಾತ ಸಂಭವಿಸುತ್ತಿವೆ. ಅಲ್ಲದೇ ರಾಜ ಕಾಲು ವೆಯ ದೊಡ್ಡ   ಚರಂಡಿಯಲ್ಲಿ ಕಸ ಕಟ್ಟಿಕೊಂಡು ನೀರು ಮುಂದಕ್ಕೆ ಸರಾಗವಾಗಿ ಹೋಗದೇ ಇರೋದರಿಂದ ಚರಂಡಿ ಗಬ್ಬೆದ್ದು ನಾರುತ್ತಿದೆ ಮತ್ತು  ಸೊಳ್ಳೆಗಳು ದಿನದಿಂದ ದಿನಕ್ಕೆ ಹೆಚ್ಚಾಗಿ, ಇದರಿಂದ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿವೆ  ಮತ್ತು ಸೇತುವೆ ಮೇಲೆ ಅರ್ಧಕ್ಕೆ ಮಾತ್ರ ತಡೆಗೋಡೆ ನಿರ್ಮಾಣ ಮಾಡಿರುವುದರಿಂದ ರಸ್ತೆಯ ಪಕ್ಕದಲ್ಲಿ ಓಡಾಡುವ   ಸಾರ್ವಜನಿಕರು ಮತ್ತು ಸೇತುವೆ ಪಕ್ಕದಲ್ಲಿ ಅಂಗನವಾಡಿ ಕೇಂದ್ರ ಇರುವುದರಿಂದ ಮಕ್ಕಳು ಆಟ ಆಡುವ ಸಮಯದಲ್ಲಿ ಚರಂಡಿಗೆ ಬಿದ್ದರೆ ಭಾರೀ ಅನಾಹುತ  ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದು ದೂರಿದರು.   

ಅಲ್ಲದೇ ಇಲ್ಲಿನ ರಸ್ತೆ ದುರಸ್ತಿ ಮತ್ತು ಸೇತುವೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ ಎಂದು ಈ ಹಿಂದೆ ಮೂರು ಬಾರಿ ಬೊಗಸ್ ಬಿಲ್ ಪಾಸ್ ಮಾಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದಾರೆ. ಈ ಬೋಗಸ್ ಬಿಲ್ ಪಡೆದಿರುವುದರ ಬಗ್ಗೆ ಕೂಡಲೇ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ರಸ್ತೆ ದುರಸ್ತಿ, ಸೇತುವೆ ನಿರ್ಮಾಣಕ್ಕೆ ಮೂರು ಬಾರಿ ಬೋಗಸ್ ಬಿಲ್ ಮಾಡಲಾಗಿದೆ ಎಂಬುದರ ದಾಖಲೆಗಳನ್ನು ಪರಿಶೀಲನೆ ನಡೆಸುವುದಾಗಿ ತಿಳಿಸಿದರು. 

ಎಇಇ ತಿಪ್ಪೇಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಸನಾವುಲಾ ಸಾಬ್, ಕಾಂಗ್ರೆಸ್ ಮುಖಂಡ ನಸ್ರುಲ್ಲಾ,  ಚಂದ್ರಪ್ಪ ಮೇದಾರ್, ರಾಜು ಆಟೋ, ಅಲಿ ಅಕ್ಬರ್, ಸಿರಾಜ್, ರಮೇಶ್, ಗಂಗಾಧರ್ ಇತರರು ಹಾಜರಿದ್ದರು.

error: Content is protected !!