ಬೆನಕನಹಳ್ಳಿ ಏತ ನೀರಾವತಿ ಯೋಜನೆಯಿಂದ ಕೊಮಾರನಹಳ್ಳಿ ಕೆರೆಗೆ ಶೀಘ್ರದಲ್ಲೇ ನೀರು

ಬೆನಕನಹಳ್ಳಿ ಏತ ನೀರಾವತಿ ಯೋಜನೆಯಿಂದ ಕೊಮಾರನಹಳ್ಳಿ ಕೆರೆಗೆ ಶೀಘ್ರದಲ್ಲೇ ನೀರು

ಹರಿಹರ ತಾಲ್ಲೂಕಿನ ನಿಯೋಗಕ್ಕೆ ಎಇಇ ಮಾಹಿತಿ

ಮಲೇಬೆನ್ನೂರು, ಜು.22- ಕೊಮಾರನಹಳ್ಳಿ ಗ್ರಾಮದ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಐತಿಹಾಸಿಕ ಕೆರೆಗೆ ಬೆನಕನಹಳ್ಳಿ ಏತ ನೀರಾವರಿ ಯೋಜನೆಯಿಂದ ಅತಿ ಶೀಘ್ರದಲ್ಲೇ ಪೈಪ್ ಲೈನ್ ಮೂಲಕ ನೀರು ಹರಿಯಲಿದೆ ಎಂದು ಅಪ್ಪರ್ ತುಂಗಾ ಮೇಲ್ದೆಂಡೆ ಯೋಜನೆಯ ನಂ-6 ಉಪವಿಭಾಗದ ಎಇಇ ಮಂಜುನಾಥ್ ತಿಳಿಸಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ಕಮ್ಮಾರಗಟ್ಟಿ ಗ್ರಾಮದ ಬಳಿ ತುಂಗಭದ್ರಾ ನದಿಯಿಂದ 19 ಕೆರೆಗಳಿಗೆ ನೀರು ಪೂರೈಸುವ ಜಾಕ್‌ವೆಲ್‌ ಕಂ ಪಂಪ್‌ಹೌಸ್‌ಗೆ ಇಂದು ಭೇಟಿ ನೀಡಿದ್ದ ಹರಿಹರ ಕ್ಷೇತ್ರದ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ವಾಗೀಶ್ ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್ ಅವರ ನೇತೃತ್ವದ ತಂಡಕ್ಕೆ ಯೋಜನೆ ಕುರಿತು ಅವರು ಅಗತ್ಯ ಮಾಹಿತಿ ನೀಡಿದರು.

ಬೆನಕನಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಹೊನ್ನಾಳಿ ತಾಲ್ಲೂಕಿನ 18 ಕೆರೆಗಳ ಜೊತೆಯಲ್ಲಿ ಹರಿಹರ ತಾಲ್ಲೂಕಿನ ಕೊಮಾರನಹಳ್ಳಿ ಕೆರೆಗೂ ನೀರು ಪೂರೈಸುವ ಕಾಮಗಾರಿಗೆ 2021ರಲ್ಲಿ ಚಾಲನೆ ಸಿಕ್ಕಿತ್ತು.

51.72 ಕೋಟಿ ರೂ. ವೆಚ್ಚದ ಈ ಕಾಮಗಾರಿಯಲ್ಲಿ ಕಮ್ಮಾರಗಟ್ಟಿ ಜಾಕ್‌ವೆಲ್‌ನಿಂದ 19 ಕೆರೆಗಳಿಗೆ ಮತ್ತು ಹರೇಗೋಣಿಗೆರೆ ಜಾಕ್‌ವೇಲ್‌ ನಿಂದ 5 ಕೆರೆಗಳಿಗೆ ನೀರು ಪೂರೈಸುವ ಬೆನಕನಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ವಿದ್ಯುತ್ ಸಂಪರ್ಕದ ಅನುಮತಿಗಾಗಿ ಕಾಯುತ್ತಿದ್ದೇವೆ.

ವಿದ್ಯುತ್ ಸಂಪರ್ಕಕ್ಕಾಗಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಗೆ ಆನ್‌ಲೈನ್ ಮೂಲಕ ಮನವಿ ಮಾಡಿದ್ದು, ವಿದ್ಯುತ್ ಸಂಪರ್ಕ ಪರಿವೀಕ್ಷಣೆ ಮಾಡಿದ ತಕ್ಷಣ ಅಂದರೆ, 15 ರಿಂದ 20 ದಿನದೊಳಗಾಗಿ ವಿದ್ಯುತ್ ಸಂಪರ್ಕ ಸಿಗುವ ಸಾಧ್ಯತೆ ಇದೆ. ವಿದ್ಯುತ್ ಸಂಪರ್ಕ ಸಿಕ್ಕ ತಕ್ಷಣ ಟ್ರಯಲ್ ಮಾಡಿ, ಯೋಜನೆಯ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದೆಂದು ಎಇಇ ಮಂಜುನಾಥ್ ಅವರು ಸ್ಪಷ್ಟ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ನಂದಿಗಾವಿ ಶ್ರೀನಿವಾಸ್ ಅವರು, ಮಂಗಳವಾರ ಬೆಂಗಳೂರಿ ನಲ್ಲಿ ಬೆಸ್ಕಾಂ ಎಂಡಿ ಮತ್ತು ಕೆಪಿಟಿಸಿಎಲ್ ಎಂಡಿ ಅವರನ್ನು ಭೇಟಿ ಮಾಡಿ, ತಕ್ಷಣ ವಿದ್ಯುತ್ ಸಂಪರ್ಕ ನೀಡುವಂತೆ ಮನವಿ ಮಾಡುತ್ತೇನೆ ಎಂದರು. 

ನದಿಯಲ್ಲಿ ಬಹಳ ನೀರು ಹರಿಯುತ್ತಿರುವುದರಿಂದ ಕೆರೆಗಳಿಗೆ ನೀರು ತುಂಬಿಸಿ ಕೊಳ್ಳಲು ಅನುಕೂಲವಾಗುತ್ತದೆ ಎಂಬುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಬೇಕೆಂದು ವಾಗೀಶ್ ಸ್ವಾಮಿ, ಜಿ.ಮಂಜುನಾಥ್ ಪಟೇಲ್ ಅವರು ಎಇಇಗೆ ತಿಳಿಸಿದರು.

ಸಹಾಯಕ ಇಂಜಿನಿಯರ್ ಕೃಷ್ಣಮೂರ್ತಿ, ಗುತ್ತಿಗೆದಾರರ ಪ್ರತಿನಿಧಿ ವರ್ಧಮಾನ್, ಮಲೇಬೆನ್ನೂರು ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬಿ.ಮಂಜುನಾಥ್, ಭಾನುವಳ್ಳಿ ಸುರೇಶ್, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್.ಶಿವಕುಮಾರ್, ತಾ.ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸು ಈ ವೇಳೆ ಹಾಜರಿದ್ದರು.

ಪ್ರಯತ್ನ ಸಫಲ : ಕೊಮಾರನಹಳ್ಳಿ ಕೆರೆಯನ್ನು ಅಭಿವೃದ್ಧಿ ಪಡಿಸಿ, ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಜಾರಿಗಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್ ಅವರು ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ನಂತರ ಶಾಸಕರಾಗಿದ್ದ ಎಸ್.ರಾಮಪ್ಪ ಅವರ ಮೂಲಕ ನಿರಂತರ ಹೋರಾಟ ಮಾಡಿದ್ದರು.

ಜೊತೆಗೆ ಅಂದು ಜಿ.ಪಂ. ಸದಸ್ಯರಾಗಿದ್ದ ಬಿ.ಎಂ.ವಾಗೀಶ್ ಸ್ವಾಮಿ ಕೂಡಾ ಬಿಜೆಪಿ ಸರ್ಕಾರದಲ್ಲಿ ಈ ಯೋಜನೆ ಜಾರಿಗಾಗಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್ ಮೂಲಕ ಪ್ರಯತ್ನಿಸಿದ್ದರು. ಆದರೆ, ಕೊನೆಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾದ ವೇಳೆ ಶಾಸಕ ರಾಮಪ್ಪ ಮತ್ತು ಜಿ.ಮಂಜುನಾಥ್ ಅವರು ಶ್ರಮವಹಿಸಿ, ಬೆನಕನಹಳ್ಳಿ ಏತ ನೀರಾವರಿ ಯೋಜನೆಗೆ ಕೊಮಾರನಹಳ್ಳಿ ಕೆರೆಯನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

error: Content is protected !!