ಜವಾಬ್ದಾರಿಯುಳ್ಳ ಯುವಕರಿಂದ ದೇಶದ ಪ್ರಗತಿ ಸಾಧ್ಯ

ಜವಾಬ್ದಾರಿಯುಳ್ಳ ಯುವಕರಿಂದ ದೇಶದ ಪ್ರಗತಿ ಸಾಧ್ಯ

ಹರಪನಹಳ್ಳಿ, ಜು.22- ಯುವ ಜನಾಂಗ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಬದುಕಿದಾಗ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಹರಾಳ ಬುಳ್ಳಪ್ಪ ಹೇಳಿದರು.

ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನಿಂದ ಪಟ್ಟಣದ ಹೊರವಲಯದ ದೇವರ ತಿಮ್ಮಲಾಪುರದ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಶಿಬಿರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯ ಸಮಾಜದಲ್ಲಿ ಸೇವಾ ಮನೋ ಭಾವದೊಂದಿಗೆ ಬದುಕಬೇಕು. ನಿಸ್ಸಹಾಯಕರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಸ್ವಾರ್ಥದಿಂದ ಬದುಕುವವರು ಬದುಕಿದ್ದರೂ ಸತ್ತಂತೆ ಎಂದು ಹೇಳಿದರು.

ಸೇವೆಯ ಮೂಲಕ ಸಮಾಜದಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರಿಂದ ಸ್ವಯಂ ಸೇವಕರ ವ್ಯಕ್ತಿತ್ವ ವಿಕಸನ ಹಾಗೂ ಸಮಾಜ ಸೇವೆಯ ಪ್ರಜ್ಞೆ ಜಾಗೃತಗೊಳ್ಳುತ್ತದೆ ಎಂದು ತಿಳಿಸಿದರು.

ಯುವಕರು ಯಾವುದೇ ಫಲಾಪೇಕ್ಷೆಯಿಲ್ಲದೆ ನಿಷ್ಕಲ್ಮಶವಾದ ಸೇವೆಯನ್ನು ದೇಶಕ್ಕಾಗಿ ಅರ್ಪಣೆ ಮಾಡಬೇಕೆಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

`ಕನ್ನಡ ನಾಡು, ನುಡಿ’ ವಿಷಯ ಕುರಿತು ಮಾತ ನಾಡಿದ ಕಸಾಪ ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಎರಡೂವರೆ ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸ ಹೊಂದಿದ ಕನ್ನಡ ನಾಡನ್ನು ಶಾತವಾಹನ, ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ ಮುಂತಾದ ರಾಜವಂಶದವರು ಆಳುವ ಮೂಲಕ ರಾಷ್ಟ್ರದ ಇತಿಹಾಸದಲ್ಲಿ ತಮ್ಮ ಕೀರ್ತಿಗಾಥೆಯನ್ನು ಸುವರ್ಣಾಕ್ಷರಗಳಿಂದ ದಾಖಲಿಸಿದ್ದಾರೆ ಎಂದರು.

ಬೇಲೂರು-ಹಳೇಬೀಡು, ಬದಾಮಿ-ಪಟ್ಟದಕಲ್ಲು, ಐಹೊಳೆ ಹಂಪಿ ಮುಂತಾದ ಸ್ಥಳಗಳು ಕನ್ನಡ ಪರಂಪರೆಗೆ ಸಾಕ್ಷಿಯಾಗಿವೆ. ಕನ್ನಡ ನಾಡು ಪ್ರಾಚೀನ ಕಾಲದಿಂದಲೂ ಧರ್ಮ, ಸಾಹಿತ್ಯ, ಸಂಗೀತ, ನೃತ್ಯ, ಕಲೆ, ಕ್ರೀಡೆ ಮತ್ತು ವಾಸ್ತು ಶಿಲ್ಪಗಳಿಗೆ ಹೆಸರು ವಾಸಿಯಾಗಿದೆ ಎಂದು ಹೇಳಿದರು.

ದ್ರಾವಿಡ ಭಾಷೆಗಳಲ್ಲಿ ಮುಕುಟಪ್ರಾಯವಾಗಿರುವ ಕನ್ನಡವು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳ ಜತೆಗೆ ಶಾಸ್ತ್ರೀಯ ಸ್ಥಾನಮಾನ ಪಡೆದ ಮೃದು ಹಾಗೂ ಮಧುರ ಭಾಷೆಯಾಗಿದೆ ಎಂದರು.

`ಜನಪದ ಸಾಹಿತ್ಯದಲ್ಲಿ ಹಾಸ್ಯ’  ವಿಷಯ ಕುರಿತು ಸಾಹಿತಿ ಸುಭದ್ರಮ್ಮ ಮಾಡ್ಲಗೇರಿ ಮಾತನಾಡಿ, ನಗು ಮತ್ತು ಅಳು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಈ ನಿಟ್ಟಿನಲ್ಲಿ ನಗುವವ ಯೋಗಿ, ನಗದವ ರೋಗಿ ಎಂಬ ಮಾತಿನಂತೆ ನಗುವಿನೊಂದಿಗೆ ಆರೋಗ್ಯವಾಗಿ ಜೀವಿಸೋಣ ಎಂದು ಹೇಳಿದರು.

ಒಗಟು, ಜಾನಪದ ಹಾಡು ಮತ್ತು ಕಥೆ ಹೀಗೆ ಜಾನಪದ ವಲಯದ ಸಾಹಿತ್ಯದಲ್ಲಿ ಸಾಕಷ್ಟು ಹಾಸ್ಯ ಕಾಣುತ್ತೇವೆ. ಆದರೆ ಇಂದಿನ ಟಿವಿ ಮತ್ತು ಮೊಬೈಲ್ ಭರಾಟೆಯಲ್ಲಿ ಜನರಲ್ಲಿ ಹಾಸ್ಯದ ಮನಸ್ಥಿತಿ ಕಡಿಮೆಯಾಗುತ್ತಿದೆ ಎಂದು ಹೇಳಿದರು. 

ಈ ವೇಳೆ ದೇವರ ತಿಮ್ಮಾಲಪುರದ ಮುಖಂಡ ಭರಮಪ್ಪ ಮರಕುಂಟಿ, ಕಾರ್ಯಕ್ರಮಾಧಿಕಾರಿ ಕೆ.ಎಂ. ಹುಚ್ಚರಾಯಪ್ಪ, ಸಹಪ್ರಾಧ್ಯಾಪಕರಾದ ವೀರೇಶ್‌, ಪುನೀತ್‌ರಾಜ್, ಎಸ್‌. ಬಾಲಾಜಿ, ಆರ್‌. ದಿವ್ಯಶ್ರೀ, ಅತಿಥಿ ಉಪನ್ಯಾಸಕಿ ಶ್ವೇತಾ  ಸೇರಿದಂತೆ ಇತರರಿದ್ದರು.

error: Content is protected !!