ಅಹಂ, ಆಸೆ ತೊರೆಯದೇ ಶಾಂತಿ ದೊರಕದು

ಅಹಂ, ಆಸೆ ತೊರೆಯದೇ ಶಾಂತಿ ದೊರಕದು

ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ

ದಾವಣಗೆರೆ, ಜೂ.22- ನಾನು ಎಂಬ ಅಹಂ ಹಾಗೂ ಬೇಕು ಬೇಕೆಂಬ ಆಸೆಯನ್ನು ಬಿಟ್ಟರೆ, ಶಾಂತಿ ತಾನಾಗಿಯೇ ತಮ್ಮ ಬಳಿ ಇರುತ್ತದೆ ಎಂದು ಹೊಸನಗರ ಮೂಲೆಗದ್ದೆ ಸದಾಶಿವ ಆಶ್ರಮದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ ಪ್ರತಿಪಾದಿಸಿದರು.

ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಹಾಗೂ ಸಿದ್ಧ ಸಮಾಧಿ ಯೋಗ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಪಿ.ಬಿ. ರಸ್ತೆಯಲ್ಲಿರುವ ಗೀತಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ,  ಶ್ರೀಗಳು ಆಶೀರ್ವಚನ ನೀಡಿದರು.

ಪ್ರಸ್ತುತ ದಿನಗಳಲ್ಲಿ ಮನುಷ್ಯ ವಸ್ತುಗಳನ್ನು ಪ್ರೀತಿಸುತ್ತಿದ್ದಾನೆಯೇ ಹೊರತು, ವ್ಯಕ್ತಿಯನ್ನಲ್ಲ.  ವಸ್ತುಗಳ ಬದಲು ವ್ಯಕ್ತಿಯನ್ನು ಪ್ರೀತಿಸಿದರೆ, ಪೂಜಿಸಿದರೆ ಸಮಾಜಕ್ಕೆ ಗೌರವ ಬರುತ್ತದೆ ಎಂದು ಹೇಳಿದರು.

ಮಕ್ಕಳಿಗೆ ಇಂಗ್ಲಿಷ್ ಕಲಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಅದೇ ನೆಪದಲ್ಲಿ ಪಾಶ್ಚಾತ್ಯ ಸಂಸ್ಕೃತಿ ಕಲಿಸಬೇಡಿ. ಇದರಿಂದ ಮಕ್ಕಳು ಹಾದಿ ತಪ್ಪುತ್ತಾರೆ. ಭಾರತೀಯ ಸಂಸ್ಕೃತಿ ಕಲಿಸಬೇಕು. ಆ ಕಲಿಕೆ ಮನೆಯಲ್ಲಿ ತಾಯಿಯಿಂದಲೇ ಆರಂಭವಾಗಬೇಕು ಎಂದು ನುಡಿದರು.

ಶ್ರೀಮಂತರು ಹೆಚ್ಚಾಗಿದ್ದಾರೆ ಎಂಬ ಕಾರಣಕ್ಕಾಗಿ ಭಾರತಕ್ಕೆ ಬೆಲೆ ಬಂದಿಲ್ಲ. ಬುದ್ಧ, ಬಸವ, ಮಹವೀರ, ಪ್ರಭಾಕರ ಗುರೂಜಿಗಳಂತಹ ಸಂತರು ನಮ್ಮ ದೇಶದಲ್ಲಿ ಜನಿಸಿದ್ದಾರೆ. ಈ ಹಿನ್ನೆಲೆೆಯಲ್ಲಿಯೇ  ಭಾರತ ಇಂದು ವಿಶ್ವಗುರು ಎನಿಸಿಕೊಂಡಿದೆ. ಎಂಬುದನ್ನು ನಾವೆಲ್ಲಾ ಅರ್ಥೈಸಿಕೊಳ್ಳಬೇಕಿದೆ ಎಂದರು.

ಕಲ್ಲು ಮೂರ್ತಿಗೂ ದೇವರಾಗುವ ಶಕ್ತಿ ನೀಡುವುದು ಗುರು ಮಾತ್ರ. ಆದ್ದರಿಂದಲೇ ಗುರು ಎಲ್ಲರಿಗಿಂತಲೂ ದೊಡ್ಡವನು. ಗುರುವಿನ ಮ ಹತ್ವವನ್ನು ತಿಳಿಸುವ ಕೆಲಸವನ್ನು ಎಸ್‌ಎಸ್‌ವೈ ಸಂಸ್ಥೆ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ  ಈ ಸಂಸ್ಥೆ ನಮ್ಮೆಲ್ಲರ ಹೆಮ್ಮೆಯ ಗುರು ಮನೆಯಾಗಲಿ ಎಂದು ಸ್ವಾಮೀಜಿ ಆಶಿಸಿದರು. ಸ್ವಾಮೀಜಿಗಳು ಸಮಾಜ ಪರಿವರ್ತನೆ ಮಾಡುವುದು ದೊಡ್ಡದಲ್ಲ. ಆದರೆ ಜನರೊಂದಿಗೆ ಬೆರೆತು ರೇಣುಕಾ ಮಾತಾಜಿ ಅವರು ತಮ್ಮ ಜೀವನವನ್ನೇ ಸಮಾಜ ಸುಧಾರಣೆಗೆ ಅರ್ಪಿಸಿ, ಸಮಾಜವನ್ನು ಎಚ್ಚರಗೊಳಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ಜಗಳೂರಿನ ಅಧ್ಯಾತ್ಮಿಕ ಚಿಂತಕ ಎಸ್.ಕೆ. ಬಸವರಾಜಪ್ಪ ಗುರುವಿನ ಮಹತ್ವ ತಿಳಿಸಿಕೊಟ್ಟರು. ಚಿಗಟೇರಿ ಜಿಲ್ಲಾಸ್ಪತ್ರೆಯ ವೈದ್ಯ  ಡಾ. ನಂದಕುಮಾರ್ ಆರೋಗ್ಯಕರ ಜೀವನ ನಡೆಸುವ ಬಗ್ಗೆ ತಿಳಿಸಿಕೊಟ್ಟರು. 

ಎಸ್.ಎಸ್.ವೈ ಶಿಕ್ಷಕ ಸಿ.ಆರ್. ಕೃಷ್ಣಮೂರ್ತಿ,  ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಟ್ರಸ್ಟ್‌ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಅಶೋಕ್ ಬಾದಾಮಿ ಇತರರು ಉಪಸ್ಥಿತರಿದ್ದರು. 

ಎಸ್.ಎಸ್.ವೈ ಬ್ರಹ್ಮೋಪದೇಶಕರಾದ ರೇಣುಕಾ ಮಾತಾಜಿ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.

error: Content is protected !!