ಶರಣರ ಸಂದೇಶಗಳು ಮಾನವ ಜನಾಂಗಕ್ಕೆ ದಾರಿದೀಪ

ಶರಣರ ಸಂದೇಶಗಳು ಮಾನವ ಜನಾಂಗಕ್ಕೆ ದಾರಿದೀಪ

ಮಲೇಬೆನ್ನೂರಿನ ಹಡಪದ ಅಪ್ಪಣ್ಣ ಜಯಂತ್ಯೋತ್ಸವದಲ್ಲಿ ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್

ಮಲೇಬೆನ್ನೂರು, ಜು.22- ಇಲ್ಲಿನ ಪುರಸಭೆ ಮತ್ತು ನಾಡ ಕಛೇರಿಯಲ್ಲಿ ಭಾನುವಾರ ಹಡಪದ ಅಪ್ಪಣ್ಣ ಜಯಂತಿಯನ್ನು ಆಚರಿಸಲಾಯಿತು. 

ಈ ವೇಳೆ ಮಾತನಾಡಿದ ಪುರಸಭೆ ಸದಸ್ಯ ಸಾಬೀರ್ ಅಲಿ, ಹಡಪದ ಅಪ್ಪಣ್ಣನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದು, ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ `ಅನುಭವ ಮಂಟಪದಲ್ಲಿ’ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಯಾಗಿ  ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗರವಾಗದಂತೆ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಹಡಪದ ಅಪ್ಪಣ್ಣ ನವರಿಗೆ ಸಲ್ಲುತ್ತದೆ.

ಹಡಪದ ಸಮಾಜದವರು ಬೆಳಿಗ್ಗೆ ಎದುರು ಗಡೆ ಬಂದರೆ ಏನೋ ಆಗುತ್ತದೆ. ಅಪಶಕುನ ಎಂಬ ಮೂಢ ನಂಬಿಕೆಯನ್ನು ಹೋಗಲಾಡಿ ಸುವುದಕ್ಕಾಗಿಯೇ ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ಕಾಣಬೇಕು. ನಂತರ ನನ್ನನ್ನು ಕಾಣಬೇಕೆಂಬ ನಿಯಮವನ್ನು ಮಾಡಿ, ಮೌಢ್ಯತೆಗೆ ಸೆಡ್ಡು ಹೊಡೆದಿದ್ದರು ಎಂದು ಸಾಬೀರ್ ಹೇಳಿದರು. 

ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್, ಶರಣರ ಸಂದೇಶ ಗಳು ಮಾನವ ಜನಾಂಗಕ್ಕೆ ದಾರಿದೀಪವಾಗಿದ್ದು, ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣನವರ ಸೇವೆ ಇಂದಿನ ಅಧಿಕಾರಿಗಳಿಗೆ ಒಂದು ಪಾಠವಾಗಿದೆ ಎಂದರು. 

ಪುರಸಭೆಯ ನಾಮ ನಿರ್ದೇಶಿತ ಸದಸ್ಯರೂ ಆದ ನಂದಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ವೀರಯ್ಯ ಮಾತನಾಡಿ, ಬಸವಣ್ಣ – ಅಪ್ಪಣ್ಣ ಸೇರಿದಂತೆ ಎಲ್ಲಾ ದಾರ್ಶನಿಕರು, ಮಾನವ ಕುಲದ ಉದ್ಧಾರಕ್ಕಾಗಿ ಮೂಢನಂಬಿಕೆಗಳ ವಿರುದ್ಧ 12ನೇ ಶತಮಾನದಲ್ಲಿ ವೈಚಾರಿಕ ಕ್ರಾಂತಿ ಸೃಷ್ಟಿ ಮಾಡಿದವರು ಎಂದು ಹೇಳಿದರು.

ಪಿಎಸಿಎಸ್ ಮಾಜಿ ಅಧ್ಯಕ್ಷ ಕೆ ಪಿ ಗಂಗಾಧರ್, ಕಾಯಕದ ಚನ್ನಬಸಪ್ಪ ಮಾತನಾಡಿದರು.

ಪುರಸಭೆ ಸದಸ್ಯರಾದ ಭೋವಿ ಶಿವು, ನಯಾಜ್, ಖಲೀಲ್ ಅಹಮದ್, ನಾಮಿನಿ ಸದಸ್ಯರಾದ ಎ.ಆರಿಫ್ ಅಲಿ, ಎಕ್ಕೇಗೊಂದಿ ಕರಿಯಪ್ಪ, ಬುಡ್ಡನವರ್ ರಫೀಕ್ ಸಾಬ್, ಬಸವರಾಜ್ ದೊಡ್ಮನಿ, ಗ್ರಾ.ಪಂ ಮಾಜಿ ಅಧ್ಯಕ್ಷ ಭೋವಿ ಕುಮಾರ್, ಮಾಜಿ ಸದಸ್ಯರಾದ ಪಿ.ಆರ್.ರಾಜು, ಎ.ಕೆ.ಲೋಕೇಶ್, ಕಾಯಕದ ಅಮರೀಶ್, ಹಾಲಿವಾಣದ ಮಹಾಂತೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಾಡ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ಆರ್.ರವಿ ಅವರು, ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸಿದರು. 

ಪುರಸಭೆ ಮುಖ್ಯಾಧಿಕಾರಿ ಭಜಕ್ಕನವರ್, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!