ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಇಳಿಮುಖ

ತುಂಗಭದ್ರಾ ನದಿಯಲ್ಲಿ  ನೀರಿನ ಹರಿವು ಇಳಿಮುಖ

ಉಕ್ಕಡಗಾತ್ರಿ – ಫತ್ತೇಪುರ ರಸ್ತೆ ಸಂಚಾರಕ್ಕೆ ಮುಕ್ತ 

ಮಲೇಬೆನ್ನೂರು, ಜು.21- ಮಲೆನಾಡಿನಲ್ಲಿ ಕಳೆದ ಒಂದು ವಾರ ಸತತವಾಗಿ ಸುರಿದ ಮುಂಗಾರು ಮಳೆ ಶನಿವಾರದಿಂದ ಕಡಿಮೆ ಆಗಿದ್ದು, ತುಂಗಾ ಮತ್ತು ಭದ್ರಾ ನದಿಗಳಲ್ಲಿ ನೀರಿನ ಹರಿವು ಭಾನುವಾರ ಗಣನೀಯವಾಗಿ ಇಳಿಕೆಯಾಗಿದೆ. 

ಗಾಜನೂರಿನ ತುಂಗಾ ಜಲಾಶಯಕ್ಕೆ ಭಾನುವಾರ ಬೆಳಗ್ಗೆ 35 ಸಾವಿರ ಕ್ಯೂಸೆಕ್ಸ್ ಇದ್ದ ಒಳ ಹರಿವು ಸಂಜೆ 30 ಸಾವಿರ ಕ್ಯೂಸೆಕ್ಸ್‌ಗೆ ಇಳಿಕೆ ಕಂಡಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಬಹಳಷ್ಟು ಕಡಿಮೆ ಆಗಿದ್ದು, ಉಕ್ಕಡಗಾತ್ರಿಯಲ್ಲಿ ತುಂಗಭದ್ರಾ ನದಿ ನೀರಿನಲ್ಲಿ ಜಲಾವೃತವಾಗಿದ್ದ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ದೇವಸ್ಥಾನದಲ್ಲಿ ಸ್ನಾನ ಘಟ್ಟ ಮತ್ತು ಹಣ್ಣು, ಕಾಯಿ ಅಂಗಡಿಗಳು ಕಾಣಿಸತೊಡಗಿವೆ. ಅಲ್ಲದೇ ಉಕ್ಕಡಗಾತ್ರಿ – ಫತ್ತೇಪುರ ರಸ್ತೆ ಸಂಪರ್ಕ ಸಂಚಾರಕ್ಕೆ ಮುಕ್ತ ಗೊಂಡಿದ್ದು, ಈಗಾಗಲೇ ವಾಹನಗಳ ಸಂಚಾರ ಆರಂಭಗೊಂಡಿವೆ ಎಂದು ದೇವಸ್ಥಾನದ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.

ಭದ್ರಾ ಒಳ ಹರಿವು ದಿಢೀರ್ ಇಳಿಕೆ : ಭದ್ರಾ ಜಲಾಶಯಕ್ಕೆ ಶನಿವಾರ 46 ಸಾವಿರ ಕ್ಯೂಸೆಕ್ಸ್ ಇದ್ದ ಒಳ ಹರಿವು ಭಾನುವಾರ 23 ಸಾವಿರ ಕ್ಯೂಸೆಕ್ಸ್‌ಗೆ ದಿಢೀರ್ ಇಳಿಕೆ ಆಗಿದೆ. ಭಾನುವಾರ ಸಂಜೆ ಜಲಾಶಯದ ನೀರಿನ ಮಟ್ಟ 166 ಅಡಿ ದಾಟಿದ್ದು, ಕಳೆದ ವರ್ಷಕ್ಕಿಂತ 23 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 143 ಅಡಿ ನೀರಿತ್ತು. ಜಲಾಶಯದ ಗರಿಷ್ಟ ಮಟ್ಟ 186 ಅಡಿಗಳಾಗಿದ್ದು, ಜಲಾಶಯ ಭರ್ತಿಗೆ 20 ಅಡಿ ಮಾತ್ರ ಬಾಕಿ ಇದೆ.

ಸಸಿ ಮಡಿಗೆ ಸಿದ್ಧತೆ : ಭದ್ರಾ ಜಲಾಶಯದಲ್ಲಿ 165 ಅಡಿ ನೀರು ಸಂಗ್ರಹವಾಗಿರುವುದರಿಂದ ಅಚ್ಚುಕಟ್ಟಿನ ರೈತರು ಮುಂಗಾರು ಹಂಗಾಮಿನ ಭತ್ತದ ಬೆಳೆಗಾಗಿ ನಾಟಿ ಮಾಡಲು, ಸಸಿ ಮಡಿ ಚೆಲ್ಲಲು ಸಿದ್ಧತೆ ನಡೆಸಿದ್ದಾರೆ. ಸ್ವಂತ ನೀರಿನ ಸೌಲಭ್ಯ ಇರುವವರು ಈಗಾಗಲೇ ಸಸಿ ಮಡಿ ಚೆಲ್ಲಿದ್ದಾರೆ.

error: Content is protected !!