ಸೊಕ್ಕೆ ಗ್ರಾಮದಲ್ಲಿ ಅನ್ನ ದಾಸೋಹ ಗೃಹ ನಿರ್ಮಾಣದ ಶಂಕುಸ್ಥಾಪನೆಯಲ್ಲಿ ನೊಣವಿನಕೆರೆ ಶ್ರೀ ಆಶೀರ್ವಚನ
ಜಗಳೂರು, ಜು. 21 – ಸಮಾಜ ಸೇವಕ ಸೊಕ್ಕೆ ತಿಪ್ಪೇಸ್ವಾಮಿ ಅವರು, ಸ್ವಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಶಿರಡಿ ಸತ್ಯ ಸಾಯಿಬಾಬಾ ದೇವಸ್ಥಾನ ಬರದ ನಾಡಿನ ಬಡವರ ಕಲ್ಯಾಣ ಮಂದಿರವಾಗಲಿ ಎಂದು ತಿಪಟೂರು ತಾಲ್ಲೂಕಿನ ನೊಣವಿನಕೆರೆ ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಸೊಕ್ಕೆ ಗ್ರಾಮದ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಹಾಗೂ ಅನ್ನ ದಾಸೋಹ ಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ನಂತರ ದಿವ್ಯಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಕಳೆದ ವರ್ಷದಲ್ಲಿ ಗಡಿ ಗ್ರಾಮದಲ್ಲಿ ಶ್ರೀ ಸಾಯಿಬಾಬಾ ಮೂರ್ತಿ ಪ್ರತಿಷ್ಠಾಪನೆಗೊಂಡ ನಂತರ ದೇವರ ಅನುಗ್ರಹದಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಭಾಗದ ಜನತೆಗಾಗಿ ಬಡವರ ಕಲ್ಯಾಣ ಕಾರ್ಯಗಳು ಜರುಗಲಿ, ಸಾಯಿಬಾಬಾ ಟ್ರಸ್ಟ್‌ನ ಟ್ರಸ್ಟಿಗಳು ನೆರೆಹೊರೆಯ ಭಾಗದ ಬಡಜನರ ಅನುಕೂಲ ಕ್ಕಾಗಿ ವಿದ್ಯೆ, ಅನ್ನ ದಾಸೋಹಕ್ಕೆ ಕೇಂದ್ರವಾಗಲಿ, ತಿಪ್ಪೇಸ್ವಾಮಿ ಅವರ ಧಾರ್ಮಿಕ, ಸಾಮಾಜಿಕ ಸೇವೆಗೆ ಸರ್ವಭಕ್ತ ಸಮೂಹ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ನೊಣವಿನಕೆರೆ ಶ್ರೀಗಳು ರಾಜ್ಯದ ಹಲವು ಭಕ್ತಸಮೂಹಕ್ಕೆ ಆರಾಧ್ಯ ದೈವವಾಗಿದ್ದಾರೆ. ಅವರ ಪಾದಾರ್ಪಣೆ ಮತ್ತು ಆಶೀರ್ವಾದದಿಂದ ನನ್ನ ಆಡಳಿತ ಕ್ಷೇತ್ರ ಸರ್ವತೋಮುಖ ಅಭಿವೃದ್ದಿಗೊಳ್ಳಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಮಹತ್ತರ ಕನಸಿನ ಯೋಜನೆ ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ ಯೋಜನೆಯಡಿ ಈಗಾಗಾಲೇ 30 ಕೆರೆಗಳಿಗೆ ನೀರು ಹರಿಯುತ್ತಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಬಡ ರೈತರ ನೀರಾವರಿ ಕನಸು ನನಸಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಾಯಿಬಾಬಾ ಮಂದಿರದ ನಿರ್ಮಾತೃ ತಿಪ್ಪೇಸ್ವಾಮಿ, ಗ್ರಾ.ಪಂ ಮಾಜಿ ಅಧ್ಯಕ್ಷರೂ ಆದ ದಿಶಾ ಸಮಿತಿ ಸದಸ್ಯೆ ಸ್ವಾತಿ ತಿಪ್ಪೇಸ್ವಾಮಿ, ಜಯಲಕ್ಷ್ಮಿ ತಿಪ್ಪೇಸ್ವಾಮಿ, ಗ್ರಾ.ಪಂ ಅಧ್ಯಕ್ಷ ತಿರುಮಲೇಶ್, ಜಿ.ಪಂ. ಮಾಜಿ ಸದಸ್ಯ ಸೊಕ್ಕೆ ನಾಗರಾಜ್, ಎ.ಎಂ. ಮರುಳಾ ರಾಧ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.