ರಾಣೇಬೆನ್ನೂರಿನಲ್ಲಿ ಉಜ್ಜಯಿನಿ ಜಗದ್ಗುರು
ರಾಣೇಬೆನ್ನೂರು, ಜು.21- ಶಿಷ್ಯರ ಒಳಿತು, ಏಳ್ಗೆ ಬಯಸಿ ಅವರಿಗೆ ಸುಂದರ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ಮಾಡುವವರೇ ಗುರುಗಳು.
ಪ್ರತಿಯೊಬ್ಬರಿಗೂ ಓರ್ವ ಗುರು ಇದ್ದೇ ಇರುತ್ತಾರೆ. ಗುರು ನೀಡುವ ಅರಿವು ಪ್ರತಿಯೊಬ್ಬರ ಬಾಳಿನಲ್ಲೂ ಬೆಳಕು ಮೂಡಿಸಲಿದೆ ಎಂದು ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ನುಡಿದರು.
ಜಗದ್ಗುರುಗಳು ರಾಣೇಬೆನ್ನೂರು ಶ್ರೀ ಚನ್ನೇಶ್ವರ ಮಠದಲ್ಲಿ ಮೂರು ದಿನಗಳಿಂದ ನಡೆದ ಆಷಾಢ ಮಾಸದ ಇಷ್ಟಲಿಂಗ ಪೂಜೆ ಮತ್ತು ಜನ ಜಾಗೃತಿ ಸಮಾರಂಭದ ಕೊನೆಯ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಆಕಾಶದಲ್ಲಿರುವ ಎಲ್ಲಾ ಮೋಡಗಳು ಮಳೆ ಸುರಿಸಲಾರವು. ಕೆಲವು ಕೇವಲ ಅಬ್ಬರಿಸುತ್ತವೆ. ಅದರಂತೆ ಎಲ್ಲಾ ಗುರುಗಳಿಂದಲೂ ಬದುಕಿನಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗಲಾರದು. ಕೆಲ ಗುರುಗಳು ಕೇವಲ ಅಬ್ಬರಿಸಬಹುದು. ಗುರುವಿನಲ್ಲಿ ಬಲವಾದ ನಂಬಿಕೆ, ಶ್ರದ್ಧಾಭಕ್ತಿ ಇಟ್ಟವರಿಗೆ ಪರಿಹಾರ ಸಿಗಲಿದೆ. ಆ ದಿಸೆಯಲ್ಲಿ ಎಲ್ಲರೂ ಗುರುವಿನ ವಿಶ್ವಾಸ ಗಳಿಸಿ, ಬದುಕು ಸುಂದರಗೊಳಿಸಿಕೊಳ್ಳಿರಿ ಎಂದು ಜಗದ್ಗುರುಗಳು ನುಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹೊನ್ನಾಳಿ ಹಿರೇಕಲ್ಮಠದ ಡಾ. ಶ್ರೀ ಒಡೆಯರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ,
ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಸಹ ಅಲ್ಲಿ ಬಂದಿರುವ ಶ್ರೀಗಳ, ಪಂಡಿತರ, ಗಣ್ಯರ ಮಾತುಗಳನ್ನು ಆಲಿಸಿ ಅಲ್ಲಿರುವ ಉಪಯುಕ್ತವಾದವುಗಳ ಪಾಲನೆಯಿಂದ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಅಲ್ಲೂ ಸಹ ನಿಮಗೆ ಗುರು ಸಿಗಲಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ರಾಣೇಬೆನ್ನೂರು ಹೊನ್ನಾಳಿ ಶ್ರೀಗಳಿಗೆ ತವರು ಮನೆಯಂತಾಗಿತ್ತು. ಈಗ ಉಜ್ಜಯಿನಿ ಜಗದ್ಗುರುಗಳ ತವರು ಮನೆಯೇ ರಾಣೇಬೆನ್ನೂರಾಗಿದ್ದು, ನಾವೆಲ್ಲರೂ ಪುಣ್ಯವಂತರು ಎಂದು ಹೇಳಿ, ಉಜ್ಜಯಿನಿ ಮಠಕ್ಕೆ ಎಂಥದೇ ತೊಂದರೆ ಬಂದರೂ ಸಹ ರಾಣೇಬೆನ್ನೂರು ಜನರೆಲ್ಲರೂ ನಿಮ್ಮ ಜೊತೆಗಿದ್ದು, ಎದುರಿಸುತ್ತೇವೆ. ತಾವು ಯಾವ ಸಮಸ್ಯೆಗೂ ಅಂಜದಿರಿ ಎಂದು ಗುರುಗಳಿಗೆ ಅರುಹಿದರು.
ವೇದಿಕೆಯಲ್ಲಿ ಕಡೇನಂದಿಹಳ್ಳಿ ವೀರಭದ್ರ ಶ್ರೀಗಳು, ಜಗಳೂರು ಹಾಗೂ ನಾಗವಂದ ಶ್ರೀಗಳು ಭಾಗವಹಿಸಿದ್ದರು.
ಸಮಾರಂಭ ಸಮೀತಿಯ ಅಧ್ಯಕ್ಷ ಫಕ್ಕೀರೇಶ ಭಸ್ಮಾಂಗಿಮಠ, ಬಸವರಾಜ ಪಟ್ಟಣಶೆಟ್ಟಿ, ವಿ.ಪಿ.ಲಿಂಗನಗೌಡ, ಹಾಲೇಶ ಗೌಳಿ, ಶಂಭು ಷಡಾಕ್ಷರಿ ಮಠ, ಉಮ್ಮೇಶ ಗುಂಡಗತ್ತಿ, ಮತ್ತಿತರರಿದ್ದರು. ಕಸ್ತೂರಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.