ನಗರದಲ್ಲಿನ ಸಂವಾದದಲ್ಲಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ರಾಜೇಶ್ ಪದ್ಮಾರ್
ದಾವಣಗೆರೆ, ಜು. 21- ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಗಳು ಪರಸ್ಪರ ಪೂರಕ ಪರಿಕಲ್ಪನೆಗಳು ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ರಾಜೇಶ್ ಪದ್ಮಾರ್ ಹೇಳಿದರು.
ನಗರದ ಶಾಂತಿ ರಾಯಲ್ ಸಭಾಂಗಣದಲ್ಲಿ `ವರ್ತಮಾನ’ ಫೋರಂ ಫಾರ್ ಇಂಟಲೆಕ್ಚುಯಲ್ ಡಿಬೆಟ್ಸ್ (ದಾವಣಗೆರೆ) ಇವರ ವತಿಯಿಂದ ನಿನ್ನೆ ಹಮ್ಮಿಕೊಂಡಿದ್ದ `ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆ’ ಕುರಿತು ಮಾತನಾಡಿದರು.
ಪ್ರಾದೇಶಿಕತೆಯು ವಿಭಿನ್ನ ಧಾರ್ಮಿಕ ಅಥವಾ ಜನಾಂಗೀಯ ಗುಂಪುಗಳು ವಿಶಿಷ್ಟವಾದ ಗುರುತನ್ನು ಹೊಂದಿರುವ ಕೆಲವು ರಾಜ್ಯಗಳ ಗಡಿಗಳಲ್ಲಿ ಸಹಬಾಳ್ವೆ ನಡೆಸುವ ಸಂದರ್ಭಗಳನ್ನು ವಿವರಿಸುತ್ತದೆ. ರಾಷ್ಟ್ರೀಯತೆಯು ರಾಷ್ಟ್ರದೊಂದಿಗೆ ಗುರುತಿನ ಪ್ರಜ್ಞೆಯಾಗಿದೆ. ಇದೊಂದು ನಂಬಿಕೆ. ಪಂಥ ಅಥವಾ ರಾಜಕೀಯ ಸಿದ್ಧಾಂತವಾಗಿದ್ದು, ರಾಷ್ಟ್ರೀಯ ಗುರುತನ್ನು ಹೊಂದಿರುತ್ತದೆ ಎಂದರು.
ರಾಷ್ಟ್ರೀಯತೆಯು ಸಂಸ್ಕೃತಿ, ಭಾಷೆ ಮತ್ತು ಧರ್ಮದ ವಿಷಯದಲ್ಲಿ ಒಂದೇ ಗುರುತನ್ನು ಸ್ಥಾಪಿಸುವ ಮೂಲಕ ಏಕತೆಯನ್ನು ಖಚಿತಪಡಿಸುತ್ತದೆ. ಭಾರತ ಬಹುರೂಪಿ, ಬಹುತ್ವದ ಸಮಾಜವನ್ನು ಹೊಂದಿದೆ. ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಗೆ ಪೂರಕವಾಗಿದ್ದು, ಒಂದಕ್ಕೊಂದು ಬೆಸೆಯುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ಸಿನಿಮಾ, ಕ್ರೀಡೆ ಸೇರಿದಂತೆ ಎಲ್ಲಾ ರಂಗಗಳಲ್ಲೂ ರಾಷ್ಟ್ರೀಯತೆ ಬೆಸದುಕೊಂಡಿದೆ. ಪ್ರಾದೇಶಿಕತೆಯ ಸಮಾಜ ರಾಷ್ಟ್ರೀಯತೆಗೆ ಅಡಿಗಲ್ಲು. ಸೈನ್ಯದಲ್ಲೂ ಕೂಡ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಯ ಸಂಗಮವನ್ನು ಕಾಣುತ್ತೇವೆ ಎಂದು ತಿಳಿಸಿದರು.
ದಾವಣಗೆರೆಯ `ವರ್ತಮಾನ’ ವೇದಿಕೆಯು ವೈಚಾರಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬರುತ್ತಿದೆ. ಇದು 32 ನೇ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
`ವರ್ತಮಾನ’ ಸದಸ್ಯ ಹೆಚ್.ಜೆ. ಪಂಚಾಕ್ಷರಿ ಅಧ್ಯಕ್ಷತೆ ವಹಿಸಿದ್ದರು. ನೇಹಾ ಚನ್ನಗಿರಿ ದೇಶಭಕ್ತಿ ಗೀತೆ ಹಾಡಿದರು. ವರ್ತಮಾನ ಸದಸ್ಯರಾದ ಆದಿತ್ಯ ಬೋಂದಾಡೆ ಸ್ವಾಗತಿಸಿದರು. ಪ್ರಸಾದ ಬಂಗೇರ ನಿರೂಪಿಸಿದರು. ನವೀನ್ ವಂದಿಸಿದರು.
ಮಾಜಿ ಮೇಯರ್ ಎಸ್.ಟಿ. ವೀರೇಶ್, ವಿಪಕ್ಷ ನಾಯಕ ಕೆ.ಪ್ರಸನ್ನ ಕುಮಾರ್, ಯೋಗ ಒಕ್ಕೂಟದ ಜಿಲ್ಲಾಧ್ಯಕ್ಷ ವಾಸುದೇವ ರಾಯ್ಕರ್, ನಿಂಚನ ನಿಂಗಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.