ಇಲಾಖೆ ಜೊತೆಗೆ ರಾಜಕೀಯ ಧುರೀಣರು ಕೈ ಜೋಡಿಸಿದಾಗ ಮಾತ್ರ ಸಂಚಾರಿ ವ್ಯವಸ್ಥೆ ಸರಿಪಡಿಸಲು ಸಾಧ್ಯ : ಎಸ್ಪಿ ಉಮಾ

ಇಲಾಖೆ ಜೊತೆಗೆ ರಾಜಕೀಯ ಧುರೀಣರು ಕೈ ಜೋಡಿಸಿದಾಗ  ಮಾತ್ರ ಸಂಚಾರಿ ವ್ಯವಸ್ಥೆ ಸರಿಪಡಿಸಲು ಸಾಧ್ಯ : ಎಸ್ಪಿ ಉಮಾ

ಹರಿಹರ, ಜು.18- ನಗರದಲ್ಲಿ ರಸ್ತೆ ಸಂಚಾರ ಸುಗಮಗೊಳಿಸಲು ಬರೀ ದಂಡ ವಿಧಿಸಿ ನಿಯಂತ್ರಣ ಮಾಡುವುದಕ್ಕಿಂತ, ಇಲಾಖೆ  ಅಧಿಕಾರಿಗಳ ಜೊತೆಗೆ ರಾಜಕೀಯ ಧುರೀಣರು ಕೈ ಜೋಡಿಸಿದಾಗ ಮಾತ್ರ ಸಂಚಾರಿ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗುತ್ತದೆ ಎಂದು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ತಿಳಿಸಿದರು.

ಗಾಂಧಿ ವೃತ್ತ,, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ರಿಲಯನ್ಸ್ ಮಾರುಕಟ್ಟೆ, ಜೆ. ಸೆವೆನ್ ಮುಂಭಾಗದ ರಸ್ತೆ ಸೇರಿದಂತೆ, ಹಲವು ರಸ್ತೆಗಳಲ್ಲಿ ಸಂಚಾರ ಮಾಡಿ,  ದಿನನಿತ್ಯ ಆಗುತ್ತಿರುವ ಸಮಸ್ಯೆ ಗಳನ್ನು ಆಲಿಸಿ, ನಂತರ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಶಾಲಾ- ಕಾಲೇಜು ಸ್ಥಳದಲ್ಲಿ ವಿದ್ಯಾರ್ಥಿಗಳು ನಿರ್ಭಯವಾಗಿ ಓಡಾಡಲು ಮತ್ತು ಬಸ್  ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಬರದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.  ಬಾರ್ ಅಂಡ್ ರೆಸ್ಟೋರೆಂಟ್‌ಗಳು ಸರ್ಕಾರದ ನಿಯಮದ ಪ್ರಕಾರ ಸಮಯ ಪಾಲನೆಯನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಹೋಗಬೇಕು.  

ನಗರದ  ಮಾರುಕಟ್ಟೆ,   ಮುಖ್ಯ ರಸ್ತೆ,  ತಹಶೀಲ್ದಾರ್ ಕಚೇರಿ ಮುಂಭಾಗ, ಸಂತೆ ನಡೆಯುವ ಸ್ಥಳಗಳಲ್ಲಿ  ರಸ್ತೆಯಲ್ಲಿ  ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವಂತಹ ಚಾಲಕರಿಗೆ ಕಡ್ಡಾಯವಾಗಿ ದಂಡವನ್ನು ಹಾಕಲಾಗುತ್ತದೆ.  ಈ ವೇಳೆ ರಾಜಕೀಯ ಪಕ್ಷಗಳ ಮುಖಂಡರಾದವರು ದಂಡವನ್ನು ಹಾಕುವಾಗ ವಾಹನಗಳ ಮಾಲೀಕರ ಪರವಾಗಿ ಶಿಫಾರಸ್ಸು ಮಾಡುವುದರ ಬದಲಾಗಿ, ಅವರು ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಸಹಕಾರ ನೀಡಿದರೆ ಸುಗಮ ಸಂಚಾರ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. 

ಆಟೋ ಚಾಲಕರು ಮತ್ತು ಮಾಲೀಕರು ರಾತ್ರಿ ವೇಳೆ ಸಾರ್ವಜನಿಕರಿಂದ ಹೆಚ್ಚು ಹಣ ಕೇಳುವುದನ್ನು ಬಿಡಬೇಕು.  ಕಡ್ಡಾಯವಾಗಿ ಲೈಸೆನ್ಸ್ ಹೊಂದಿರುವ ವ್ಯಕ್ತಿಗಳು ಮಾತ್ರ ಆಟೋ ಚಾಲನೆ ಮಾಡಬೇಕು.  ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ವೇಳೆಯಲ್ಲಿ ಚಿಕಿತ್ಸೆಗೆ ಬರುವ ವ್ಯಕ್ತಿಗಳು ವೈದ್ಯರ ಜೊತೆಗೆ ಅಸಭ್ಯವಾಗಿ ವರ್ತಿಸಿದರೆ  ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆಟೋ ಮತ್ತು  ವ್ಯಾನ್ ಮಾಲೀಕರು  ಮಕ್ಕಳನ್ನು    ಸರ್ಕಾರದ ಮಾರ್ಗಸೂಚಿ ಅನ್ವಯದಂತೆ ಕರೆದು ಕೊಂಡು ಹೋಗಬೇಕು ಎಂದು ಎಚ್ಚರಿಸಿದರು.   

ನಗರದಲ್ಲಿ ಬಹುತೇಕ ಕಡೆಗಳಲ್ಲಿ ಸಿಸಿ ಕ್ಯಾಮರಾ ಇಲ್ಲದೇ ಹೋದರೆ ಕಳ್ಳತನ, ಅಕ್ರಮ ಚಟುವಟಿಕೆ, ಸೇರಿದಂತೆ ಅನೇಕ ಕೃತ್ಯಗಳನ್ನು ನಿಯಂತ್ರಣಕ್ಕೆ ತರುವುದು ಕಷ್ಟವಾಗುತ್ತದೆ.  ಆದ್ದರಿಂದ ಪೊಲೀಸ್ ಇಲಾಖೆಯ ಜೊತೆಗೆ ನಗರಸಭೆ, ಲೋಕೋಪಯೋಗಿ ಸೇರಿದಂತೆ ಎಲ್ಲರೂ ಸಹಕಾರ ನೀಡಿದಾಗ ಸುಗಮ ಸಂಚಾರ ವ್ಯವಸ್ಥೆ ತರಲು   ಅನುಕೂಲ ಆಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಜಿ.ಎಸ್. ಬಸವರಾಜ್, ನಗರ ಠಾಣೆಯ ಸಿಪಿಐ ಸುರೇಶ್ ಸಗರಿ, ಪೊಲೀಸ್ ಇನ್ಸ್‌ಪೆಕ್ಟರ್ ದೇವಾನಂದ್, ಪಿಎಸ್ಐಗಳಾದ ವಿಜಯಕುಮಾರ್, ಶ್ರೀಪತಿ ಅಗ್ನಿ, ಎಎಸ್ಐಗಳಾದ ರಾಜಶೇಖರ್, ಮನಸೂರ್‌ ಆಹ್ಮದ್, ಪೊಲೀಸ್ ಸಿಬ್ಬಂದಿ ವರ್ಗದ ನಿಂಗರಾಜ್, ಸತೀಶ್, ನಾಗರಾಜ್, ತಿಪ್ಪೇಸ್ವಾಮಿ, ರಿಜ್ವಾನ್ ಆಹ್ಮದ್, ನಾಯ್ಕ್, ಅಂಜಾದ್ ಹಾಗೂ ನಿವೃತ್ತ ಇಂಜಿನಿಯರ್ ಮಲ್ಲಿಕಾರ್ಜುನ್,  ದೇವೇಂದ್ರಪ್ಪ, ಕೃಷ್ಣ, ಮಂಜುನಾಥ್ ಕೊಪ್ಪಳ, ಕೆ.ಎಸ್.ಆರ್.ಟಿ. ಸಿ ಸಿಬ್ಬಂದಿಗಳು ಹಾಜರಿದ್ದರು.

ಸಿಬ್ಬಂದಿ ಕೊರತೆ : ಹರಿಹರದಲ್ಲಿ ಜನಸಂಖ್ಯೆ ಅಧಿಕವಾಗಿ ಇರುವ ಕಾರಣ, ಸಾಕಷ್ಟು ಸಮಸ್ಯೆಗಳೂ ಇವೆ. ಅದಕ್ಕೆ ತಕ್ಕಂತೆ ನಗರ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗಳ ಕೊರತೆ ಇರುತ್ತದೆ.    ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆಗೆ ಈಗಾಗಲೇ ಚರ್ಚಿಸಲಾಗಿದೆ. ಸಂಚಾರಿ ಪೊಲೀಸ್ ಠಾಣೆ ತೆರೆಯುವ ಬಗ್ಗೆಯೂ  ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.

error: Content is protected !!