ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆ

ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆ

ಹರಿಹರ, ಜು. 18 – ನಗರದಲ್ಲಿ ಬೀದಿಬದಿ ರಸ್ತೆಯಲ್ಲಿ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿರುವುದನ್ನು ಖಂಡಿಸಿ, ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿ ಪಿಎಸ್ಐ ಶ್ರೀಪತಿ ಗಿನ್ನಿ ಯವರಿಗೆ ಮನವಿಯನ್ನು ಅರ್ಪಿಸಿದರು.

ಪ್ರತಿಭಟನಾ ಮೆರವಣಿಗೆ ಗಾಂಧಿ ವೃತ್ತದಿಂದ ಪ್ರಾರಂಭಗೊಂಡು ಹಳೆ ಪಿ.ಬಿ. ರಸ್ತೆ ಪೇಟೆ, ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ರಾಣಿ ಚೆನ್ನಮ್ಮ ವೃತ್ತ ಮುಖ್ಯ ರಸ್ತೆಯ ಮುಖಾಂತರ ಪೊಲೀಸ್ ಠಾಣೆಗೆ ಅಂತ್ಯಗೊಂಡಿತು.

ಈ ವೇಳೆ ಬೀದಿ ಬದಿಯ ವ್ಯಾಪಾರಿ ಸಂಘದ ಮುಖಂಡರು ಮಾತನಾಡಿ, ಹಳೆ ಪಿ.ಬಿ ರಸ್ತೆ, ಶಿವಮೊಗ್ಗ ರಸ್ತೆ, ಶೋಭಾ ಟಾಕೀಸ್ ರಸ್ತೆ, ಮತ್ತು ದೇವಸ್ಥಾನ ರಸ್ತೆಗಳಲ್ಲಿ ಬೀದಿ ಬದಿಯ ಅಂಗಡಿಗಳು ಹೆಚ್ಚು ಇದ್ದು ಇಲ್ಲಿನ ಅನೇಕ ಅಂಗಡಿಯವರಿಗೆ ಪೊಲೀಸ್ ಇಲಾಖೆ ನೋಟಿಸ್ ಕೊಟ್ಟಿದೆ. ಆದರೆ 2014 ರ ಬೀದಿಬದಿಯ ವ್ಯಾಪಾರಸ್ಥರ ಸಂರಕ್ಷಣಾ ಹಾಗೂ ನಿಯಂತ್ರಣ ಅಧಿ ನಿಯಮದ ಪ್ರಕಾರ ಇಂತಹ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. 

ಪೊಲೀಸ್ ರ ಅಹವಾಲುಗಳೇನೆ ಇದ್ದರೂ ನೇರವಾಗಿ ನಗರ ಪಾಲಿಕೆಗೆ ತಿಳಿಸತಕ್ಕದ್ದು ಹಾಗೂ ನಗರ ಪಾಲಿಕೆಯ ಟಿ.ವಿ.ಸಿ. ಸಮಿತಿಯಲ್ಲಿ ವೆಂಡಿಂಗ್ ಜೋನ್‌ಗಳ ಬಯ ಬೀದಿ ವ್ಯಾಪಾರಸ್ಥರ ಅನುಕೂಲ ತಕ್ಕಂತೆ ಚರ್ಚಿಸಿ ಪಾಲಿಕೆಯು ನಿರ್ಧಾರ ಕೈಗೊಳ್ಳುತ್ತದೆ. ಇದರಲ್ಲಿ ಒಪ್ಪಿಗೆ ಇರದೇ ಹೋದರೆ ಬೀದಿಬದಿ ವ್ಯಾಪಾರಸ್ಥರು ನಗರ ಪಾಲಿಕೆಯೊಂದಿಗೆ ಟಿ.ವಿ.ಸಿ. ಮೂಲಕ ಚರ್ಚೆ ನಡೆಯುತ್ತದೆ ನಿಯಮ ಹೀಗಿರುವಾಗ ಪೊಲೀಸ್ ಇಲಾಖೆಯ ಹಸ್ತಕ್ಷೇಪವನ್ನು ಮಾಡಿದೆ. ದಶಕಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿರುವ ಬಡ ಬೀದಿಬದಿ ವ್ಯಾಪರಿಗಳಿಗೆ ಭಯ ಪಡಿಸುವ ಕಾರ್ಯ ಮಾಡದೆ ತಾವು ನೀಡಿರುವ ನೋಟಿಸ್ ಹಿಂಪಡೆದು ವ್ಯಾಪಾರಿಗಳಿಗೆ ಮುಂದುವರೆಸಿಕೊಂಡು ಹೋಗಲು ಸಹಕರಿಸುವಂತೆ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬೀದಿಬದಿ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಸಾಬ್, ಕಾರ್ಯದರ್ಶಿ ಕೆ. ಭಾರತಿ, ತಾಲ್ಲೂಕು ಸಂಚಾಲಕಿ ಮಂಜುಳಮ್ಮ, ಆನಂದ್, ಕೃಷ್ಣಪ್ಪ, ಯಲ್ಲಮ್ಮ, ಚೆನ್ನಪ್ಪ ಕುರವತ್ತಿ, ಗಾಯಿತ್ರಿ, ನೀಲಪ್ಪ, ರೇಣುಕಾ, ದುಗ್ಗಮ್ಮ, ಜಯ್ಯಪ್ಪ ಇತರರು ಹಾಜರಿದ್ದರು. ‌ 

error: Content is protected !!