ದಾವಣಗೆರೆ, ಜು. 18 – ದೇಶದ ಅಭಿವೃದ್ದಿಗೆ ಶಿಕ್ಷಣವೇ ತಳಹದಿ, ಎಲ್ಲಾ ಮಕ್ಕಳು ಶಿಕ್ಷಣ ಪಡೆಯ ಬೇಕೆಂಬುದು ಸರ್ಕಾರ ಹಾಗೂ ಇಲಾಖೆ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಇದೇ ದಿನಾಂಕ 31 ರವರೆಗೆ ವಿಶೇಷ ದಾಖಲಾತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಪ್ರವೇಶ ಕಲ್ಪಿಸಬೇಕೆಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಕರೆ ನೀಡಿದ್ದಾರೆ.
ಶಿಕ್ಷಣ ವಂಚಿತ ಮಕ್ಕಳು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂಬುದನ್ನು ಸಾಕ್ಷೀಕರಿಸಲು ಸರ್ಕಾರ, ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಸಂಘ-ಸಂಸ್ಥೆಗಳು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಆಂದೋಲನಗಳ ಮೂಲಕ ಪೋಷಕರು ಮತ್ತು ಸಮುದಾಯಕ್ಕೆ ಜಾಗೃತಿಯ ಅರಿವನ್ನು ಮೂಡಿಸಬೇಕು.
ಶಿಕ್ಷಣ ವಂಚಿತ ಮತ್ತು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರಲು ಮತ್ತು ಆ ಮಕ್ಕಳನ್ನು ಉಚಿತ ಹಾಗೂ ಕಡ್ಡಾಯ ಶಿಕ್ಷಣದ ವ್ಯಾಪ್ತಿಗೆ ಒಳಪಡಿಸುವುದು ನಮ್ಮ ಆದ್ಯತೆಯಾಗಿ ರುವುದರಿಂದ ಈ ಆಂದೋಲನದ ಅಡಿಯಲ್ಲಿ ಶಾಲಾ ಶಿಕ್ಷಕರು, ಶಿಕ್ಷಣಾಸಕ್ತರು, ಜನಪ್ರತಿನಿಧಿಗಳು, ಮುಖಂಡರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಾಲಾ ಮಕ್ಕಳೊಂದಿಗೆ ಗ್ರಾಮಗಳಲ್ಲಿ ಮತ್ತು ವಾರ್ಡ್ ಗಳಲ್ಲಿ ಬ್ಯಾನರ್‍ಗಳೊಂದಿಗೆ ಜಾಥಾ ನಡೆಸಿ, ಘೋಷಣೆಗಳ ಮುಖಾಂತರ ಸಮುದಾಯದಲ್ಲಿ ಜಾಗೃತಿಯ ಅರಿವನ್ನು ಮೂಡಿಸ ಬೇಕಿರುವುದು ಇಂದಿನ ತುರ್ತು ಕಾರ್ಯವಾಗಿದೆ.
ಈ ನಿಟ್ಟಿನಲ್ಲಿ ಶಾಲೆಯನ್ನು ಬಿಟ್ಟಿರುವ ಮಕ್ಕಳ ಪೋಷಕರೊಂದಿಗೆ ವಲಸೆ ಬಂದ ಕುಟುಂಬಗಳ ಮುಖ್ಯಸ್ಥರೊಂದಿಗೆ ಮತ್ತು ದಿನಗೂಲಿ ಮಾಡುತ್ತಿರುವ ಮಕ್ಕಳು ಕಂಡುಬಂದಲ್ಲಿ ಅವರ ಮಾಲೀಕರ ಜೊತೆ ಸಮಾಲೋಚಿಸಿ ಮಕ್ಕಳನ್ನು ಹತ್ತಿರದ ಶಾಲೆಗಳಿಗೆ ಸೇರಿಸಲು ಮನವೊಲಿಕೆ ಮಾಡಲು ಸಾರ್ವಜನಿಕರಲ್ಲಿ ಕೋರಿದೆ. ಜೊತೆಗೆ ಬಾಲ್ಯ ವಿವಾಹ, ಅನಾರೋಗ್ಯ ಹಾಗೂ ಇನ್ನಿತರೆ ಕಾರಣಗಳಿಂದ ಶಾಲೆ ಬಿಟ್ಟಿದ್ದಲ್ಲಿ, ಅಂತಹವರನ್ನು ಗುರುತಿಸಿ ಶಾಲಾ ವ್ಯಾಪ್ತಿಗೆ ಕರೆ ತರಲು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಒಳಗೊಂಡು ಈ ಕೆಲಸ ಮಾಡಬೇಕೆಂದು ಸಂಸದರು ತಿಳಿಸಿದ್ದಾರೆ.