ಸರ್ಕಾರಿ ಶಾಲೆಗಳ ಉಳಿವಿಗೆ ದಾನಿಗಳ ಸಹಾಯ ಅಗತ್ಯ

ಸರ್ಕಾರಿ ಶಾಲೆಗಳ ಉಳಿವಿಗೆ ದಾನಿಗಳ ಸಹಾಯ ಅಗತ್ಯ

ಹರಿಹರ, ಜು. 17 – ಬೆಂಗಳೂರಿನ ಹೆಲ್ಪ್ ಟು ಎಜುಕೇಷನ್ ಫೌಂಡೇಷನ್ ಸಂಸ್ಥೆಯಿಂದ ತಾಲ್ಲೂಕಿನ ಕೆಂಚನಹಳ್ಳಿ, ಪಾಮೇನಹಳ್ಳಿ, ಜಿ.ಟಿ.ಕಟ್ಟೆ ಹಾಗೂ ಹರಿಹರದ ಜೈಭೀಮ ನಗರ, ವಿದ್ಯಾನಗರ ಮತ್ತು ಅಮರಾವತಿ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಒಟ್ಟು 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ನೋಟ್ ಬುಕ್‍ಗಳನ್ನು ವಿತರಿಸಲಾಯಿತು.

ಜೈಭೀಮನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಗ್‌ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಚ್.ಮಲ್ಲೆಶ್ ಮಾತನಾಡಿ, ರಾಜ್ಯದಲ್ಲಿ ರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿರುವುದು ಆತಂಕಕಾರಿಯಾಗಿದೆ ಎಂದು ಅವರು ಹೇಳಿದರು.

ಸರ್ಕಾರಿ ಶಾಲೆಗಳ ಜೀರ್ಣೋದ್ಧಾರ ಕ್ಕಾಗಿಯೇ ಸರ್ಕಾರ ಹತ್ತಾರು ಯೋಜನೆ ಗಳನ್ನು ಜಾರಿ ಮಾಡಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತಿದೆ. ಸರ್ಕಾರದ ಈ ಪ್ರಯತ್ನದ ಜೊತೆಗೆ ಸಮುದಾಯದ ಪಾಲ್ಗೊಳ್ಳುವಿಕೆಯೂ ಅತ್ಯಗತ್ಯವಾಗಿದೆ ಎಂದರು.

ಬೆಂಗಳೂರಿನಲ್ಲಿರುವ ದೊಡ್ಡ ಸಂಸ್ಥೆಗಳು ತಮ್ಮ ಲಾಭಾಂಶದಲ್ಲಿ ಕೆಲ ಭಾಗವನ್ನು ಗ್ರಾಮೀಣ ಭಾಗದ ಶಾಲೆಗಳ ವಿದ್ಯಾರ್ಥಿಗಳ ಪಾಠೋ ಪಕರಣಕ್ಕೆ ವ್ಯಯಿಸುತ್ತಿರುವುದು ಶ್ಲ್ಯಾಘನೀಯ. ಇದೇ ಮಾದರಿಯಲ್ಲಿ ಇತರೆ ಸಂಸ್ಥೆಗಳು ಶಾಲೆಗಳ ಭೌತಿಕ ಅಭಿವೃದ್ಧಿಗೂ ಅನುದಾನ ಬಿಡುಗಡೆ ಮಾಡಿದರೆ ಉತ್ತಮ ಎಂದು ಸಲಹೆ ನೀಡಿದರು.

ಹೆಲ್ಪ್ ಟು ಎಜುಕೇಷನ್ ಫೌಂಡೇಷನ್ ಸಂಸ್ಥೆಯ ಸದಸ್ಯ ಮೋಹನ್ ಮಾತನಾಡಿ, ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿ ಎಂದು ಭಾವಿಸಿ, ಅವರಿಗೆ ಉತ್ತಮ ಶಿಕ್ಷಣ ದೊರಕಿಸ ಬೇಕೆಂದು ಕರೆ ನೀಡಿದರು.

ಹೆಲ್ಪ್ ಟು ಎಜುಕೇಷನ್ ಫೌಂಡೇಷನ್ ಸಂಸ್ಥೆಯ ಮತ್ತೊಬ್ಬ ಸದಸ್ಯ ದೇವರಾಜ್ ಮಾತನಾಡಿ, ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದೆಂಬುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಶಿಕ್ಷಣ ಪಡೆದಂತಹ ವ್ಯಕ್ತಿ ದೇಶದ ಅಮೂಲ್ಯ ಸಂಪನ್ಮೂಲವಾಗುತ್ತಾನೆ ಎಂದರು.

ಹರಿಹರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣ ಕುಮಾರ್ ಹೆಗಡೆ ಮಾತನಾಡಿ, ಈ ಸಂಸ್ಥೆಯ ಮುಖ್ಯಸ್ಥ ವೆಂಕಟೇಶ್‌ ಅವರ ಕಾರ್ಯ ಶ್ಲ್ಯಾಘನೀಯ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ವೆಂಕಟೇಶ್, ಚನ್ನಬಸಪ್ಪ, ಗಿರಿಜಾಂಬ, ಸತೀಶ್, ನಿಂಗಪ್ಪ, ರಂಗಪ್ಪ, ಶಿವಕುಮಾರ್, ಶಿಕ್ಷಕರಾದ ಪೀರೂನಾಯ್ಕ್, ಪರಶುರಾಮ, ರಾಘವೇಂದ್ರ, ಪ್ರವೀಣ್, ರಾಮನಗೌಡ ಪ್ಯಾಟಿ, ಬಿ.ಎನ್.ವೀರಪ್ಪ, ಶಶಿಕುಮಾರ್, ಗಿರೀಶ್ ಹಾಗೂ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿ, ಪೋಷಕರು ಇದ್ದರು.

error: Content is protected !!