ಹಳೆ ಐನೂರು ಗ್ರಾಮ ಹಾಗೂ ಸಾಸ್ವೆಹಳ್ಳಿಯ ದಾಸರ ಬೀದಿ ಜನವಸತಿ ಪ್ರದೇಶದ ಕೆಲವು ಮನೆಗಳು ಜಲಾವೃತಗೊಳ್ಳುವ ಸಾಧ್ಯತೆ – ನಿವಾಸಿಗಳಿಗೆ ಉಪವಿಭಾಗಾಧಿಕಾರಿಗಳ ಎಚ್ಚರಿಕೆ
ಸಾಸ್ವೆಹಳ್ಳಿ, ಜು. 17- ತುಂಗಾ ಮತ್ತು ಭದ್ರಾ ಜಲಾಶಯದ ಪ್ರದೇಶದಲ್ಲಿ ಕಳೆದ 3-4 ದಿನಗಳಿಂದ ಅತ್ಯಧಿಕ ಮಳೆ ಆಗುತ್ತಿದ್ದು, ಈಗಾಗಲೇ ತುಂಗಾ ಜಲಾಶಯ ತುಂಬಿರುವ ಕಾರಣ ನದಿಗೆ ನೀರು ಬಿಡಲಾಗಿದೆ.
ಅವಳಿ ತಾಲ್ಲೂಕಿನಲ್ಲಿ ಹಾದು ಹೋಗಿರುವ ತುಂಗಭದ್ರಾ ನದಿ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ನದಿಯ ನೀರಿನ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾದಲ್ಲಿ ಹೋಬಳಿಯ ಹಳೆ ಐನೂರು ಗ್ರಾಮ ಹಾಗೂ ಸಾಸ್ವೆಹಳ್ಳಿಯ ದಾಸರ ಬೀದಿ ಜನವಸತಿ ಪ್ರದೇಶದ ಕೆಲವು ಮನೆಗಳು ಜಲಾವೃತಗೊಳ್ಳಲಿವೆ. ಆ ಮನೆಗಳಿಗೆ ಹೊನ್ನಾಳಿ-ಚನ್ನಗಿರಿ ಉಪ ವಿಭಾಗದ ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಬುಧವಾರ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಿದರು.
ನದಿಯ ನೀರಿನ ಮಟ್ಟ ಇನ್ನೂ ಹೆಚ್ಚಾಗಿ, ಈ ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಸಾಧ್ಯತೆ ಕಂಡು ಬಂದಲ್ಲಿ, ಕೂಡಲೇ ಗಂಜಿ ಕೇಂದ್ರ ತೆರೆದು ಗಂಜಿ ಕೇಂದ್ರಕ್ಕೆ ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ನಮ್ಮ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಅಭಿಷೇಕ್ ಅವರು ತಿಳಿಸಿದರು.
ಸ್ಥಳೀಯ ನಿವಾಸಿಗಳು `ಪ್ರತಿವರ್ಷ ಮಳೆಗಾಲದಲ್ಲಿ ನದಿಯ ಪ್ರವಾಹದಿಂದ ಮನೆಗಳು ಜಲಾವೃತಗೊಂಡು ಆಗುತ್ತಿರುವ ತೊಂದರೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಿ’ ಎಂದು ಉಪ ವಿಭಾಗಾಧಿಕಾರಿಗಳನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೊನ್ನಾಳಿ ತಹಶೀಲ್ದಾರ್ ಪಟ್ಟರಾಜ ಗೌಡ, ಪಿಐ ಸುನಿಲ್ ಕುಮಾರ್, ಉಪತಹಶೀಲ್ದಾರ್ ಚಂದ್ರಪ್ಪ, ರಾಜಸ್ವ ನಿರೀಕ್ಷಕ ದಿನೇಶ್ ಬಾಬು, ಗ್ರಾಮ ಲೆಕ್ಕಾಧಿಕಾರಿ ಧರ್ಮಪ್ಪ, ಮಂಜುನಾಥ್, ಸಿಬ್ಬಂದಿ ತಿಪ್ಪೇಶ್ ಉಪಸ್ಥಿತರಿದ್ದರು.