ಸವಾಲುಗಳಿಗೆ ಅಂಜದೇ – ಅಳುಕದೇ ಬದುಕು ಕಟ್ಟಿಕೊಳ್ಳಬೇಕು

ಸವಾಲುಗಳಿಗೆ ಅಂಜದೇ – ಅಳುಕದೇ ಬದುಕು ಕಟ್ಟಿಕೊಳ್ಳಬೇಕು

ಹೊನ್ನಾಳಿಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಕೆ. ನಾಗೇಶ್

ಇನ್ನೊಂದು ತಿಂಗಳಲ್ಲಿ ದಾವಣಗೆರೆಯಲ್ಲಿ ಐಎಎಸ್ – ಕೆಎಎಸ್ ತರಬೇತಿ ಕೇಂದ್ರ ಪ್ರಾರಂಭ

– ಜಿ.ಬಿ. ವಿನಯ್ ಕುಮಾರ್

ಹೊನ್ನಾಳಿ, ಜು.16- ಬರುವ ಒಂದು ತಿಂಗಳೊಳಗಾಗಿ ದಾವಣಗೆರೆಯಲ್ಲಿ ಐಎಎಸ್ – ಕೆಎಎಸ್ ತರಬೇತಿ ಕೇಂದ್ರವನ್ನು ತೆರೆಯುವುದಾಗಿ ಇನ್‌ಸೈಟ್  ತರಬೇತಿ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯ್ ಕುಮಾರ್ ತಿಳಿಸಿದರು.

ಇಲ್ಲಿನ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ದಲ್ಲಿ ಮಂಗಳವಾರ ನಡೆದ ಕ್ರೀಡೆ, ಸಾಂಸ್ಕೃತಿಕ, ಎನ್ಎಸ್ಎಸ್ ವಿವಿಧ ವೇದಿಕೆಗಳ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ ಹಾಗೂ ತೃತೀಯ ವರ್ಷದ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. 

ದಾವಣಗೆರೆ ವಿಶ್ವವಿದ್ಯಾಲಯದ ಪ್ರಥಮ
ರಾಂಕ್ ಪಡೆದ ಈ ಕಾಲೇಜಿನ ಎಸ್.ಸಿಂಧೂಬಾಯಿ ಅವರಂತಹ ಸಾಧನೆಯ ವಿದ್ಯಾರ್ಥಿಗಳು ಐಎಎಸ್ –  ಕೆಎಎಸ್ ವಿದ್ಯಾಭ್ಯಾಸ ಪಡೆಯಲು ಮುಂದಾದರೆ ಉಚಿತ ಶಿಕ್ಷಣ ನೀಡುವುದಾಗಿ ಅವರು ಹೇಳಿದರು.

ರಾಜಕಾರಣದ ಮೂಲಕವೂ ಶಿಕ್ಷಣ ಸುಧಾರಣೆ – ವಿದ್ಯಾರ್ಥಿಗಳೇ ನೀವು ತಿಳಿದಂತೆ ಕೆಎಎಸ್ ಹಾಗೂ ಐಎಎಸ್ ಇರುವ ಅರ್ಥ ಒಂದಾದರೆ, ನಾನು ತಿಳಿದಿರುವಂತೆ `ಕೆಎಎಸ್ ಎಂದರೆ – ಎಂಎಲ್ಎ, ಐಎಎಸ್ ಎಂದರೆ – ಎಂಪಿ ಎಂಬುದಾಗಿದೆ.’

ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಎಂತಹ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ನಾನೇ ಸಾಕ್ಷಿಯಾಗಿ ನಿಲ್ಲುವೆ ಎಂದು ತಾವು ಆರಂಭದಲ್ಲಿ ಬೆಂಗಳೂರಿನಲ್ಲಿ ತೆರೆದ ತರಬೇತಿ ಕೇಂದ್ರದ ದಿನಗಳನ್ನು ವಿವರಿಸಿ, ಇಂದು ಏಳ ರಿಂದ ಎಂಟು ರಾಜ್ಯಗಳಲ್ಲಿ ಹತ್ತು ವರ್ಷದಿಂದ 1500ಕ್ಕೂ ಹೆಚ್ಚು ಸಾಧಕರು ತರಬೇತಿಯ ಮೂಲಕ ಪ್ರಯೋಜನ ಪಡೆದಿರುತ್ತಾರೆಂದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮತ್ತೊಬ್ಬರು ನಮ್ಮಿಂದ ಕದಿಯಲಾಗದ ವಸ್ತು ಎಂದರೆ
ಅದು ತಾವುಗಳು ಪಡೆದಿರುವ `ವಿದ್ಯೆ’ಯಾಗಿದೆ ಎಂಬುದನ್ನು ವಿವರಿಸಿ, ದುಶ್ಚಟಗಳಿಂದ ವಿದ್ಯಾರ್ಥಿಗಳು ದೂರವಿದ್ದು, ವಿದ್ಯಾ ಕ್ಷೇತ್ರದಲ್ಲಿ ಸಾಧನೆಗೆ ಅನೇಕ ಅವಕಾಶಗಳಿವೆ ಎಂದರು.

ಕಾಲೇಜು ಸಾಂಸ್ಕೃತಿಕ ಸಂಚಾಲಕ ಕೆ.ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪದವಿ ಪಡೆದು ಹೊರ ಹೋಗುವ ವಿದ್ಯಾರ್ಥಿಗಳು ತಮ್ಮ ಕನಸು ನನಸಾಗಿಸುವ ನಿಟ್ಟಿನಲ್ಲಿ ಬದುಕನ್ನು ಕಟ್ಟಿಕೊಳ್ಳುವಂತಾಗಲಿ.

ಮುಂಬರುವ ದಿನಗಳು ಸವಾಲಿನ ದಿನಗಳು ಅಂಜದೇ – ಅಳುಕದೇ ನೌಕರಿ ಸಿಕ್ಕರೆ ಸರಿ, ಇಲ್ಲವಾದಲ್ಲಿ ತಾವು ಧೃತಿಗೆಡದೇ ಅನೇಕ ರೀತಿಯ ಅವಕಾಶ ಗಳಿರುವ ಬದುಕು ಕಟ್ಟಿ ಕೊಳ್ಳುವ ಆತ್ಮವಿಶ್ವಾಸವನ್ನು ಹೊಂದಬೇಕೆಂದರು.

 ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಎಲ್.ನರಗಟ್ಟಿ ಮಾತನಾಡಿದರು.

ಕಾಲೇಜು ಪ್ರಾಚಾರ್ಯರಾದ ಪ್ರವೀಣ್ ದೊಡ್ಡ ಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಚೆನ್ನಯ್ಯ ಬೆನ್ನೂರು ಮಠ ಮತ್ತಿತರರು  ಉಪಸ್ಥಿತರಿದ್ದರು.

error: Content is protected !!