ಕೀಟ ನಾಶಕ ಬದಲಾವಣೆ, ಸರಿ ಪ್ರಮಾಣದ ಸಿಂಪರಣೆಯಿಂದ ಲದ್ದಿಹುಳು ಹತೋಟಿ ಸಾಧ್ಯ

ಕೀಟ ನಾಶಕ ಬದಲಾವಣೆ, ಸರಿ ಪ್ರಮಾಣದ ಸಿಂಪರಣೆಯಿಂದ ಲದ್ದಿಹುಳು ಹತೋಟಿ ಸಾಧ್ಯ

ಜಗಳೂರು ತಾಲ್ಲೂಕಿನ ಕಾರ್ಯಕ್ರಮದಲ್ಲಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಟಿ.ಎನ್‌. ದೇವರಾಜ್‌ ಪ್ರತಿಪಾದನೆ

ಜಗಳೂರು,ಜು.16- ಮೆಕ್ಕೆಜೋಳದ ಲದ್ದಿ ಹುಳುವಿನ ಸಮರ್ಪಕ ಹತೋಟಿಯಲ್ಲಿ ಕೀಟ ನಾಶಕಗಳ ಬದಲಾವಣೆ ಹಾಗೂ ಸರಿಯಾದ ಪ್ರಮಾಣದಲ್ಲಿ ಸಿಂಪರಣೆ ಅತಿ ಮುಖ್ಯ ಎಂದು ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಟಿ.ಎನ್‌. ದೇವರಾಜ್‌ ತಿಳಿಸಿದರು.

ಜಗಳೂರು ತಾಲ್ಲೂಕಿನ ಮರಿಕುಂಟೆ, ಕಲ್ಲೇದೇವರಪುರ, ಬಿದರಕೆರೆ ಮತ್ತು ಇತರೆ ಗ್ರಾಮಗಳ ಮೆಕ್ಕೆಜೋಳದ ತಾಕುಗಳಿಗೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ ಮೆಕ್ಕೆಜೋಳದ ಬಿತ್ತನೆಯಾಗಿದ್ದು, ಬೆಳೆಯು ಉತ್ತಮವಾಗಿದೆ. ಆದರೆ ಲದ್ದಿ ಹುಳುವಿನ ಬಾಧೆ ಅಲ್ಲಲ್ಲಿ ಕಂಡುಬರುತ್ತಿದೆ. ಹಾಗಾಗಿ ರೈತರು ಜೈವಿಕ ನಿಯಂತ್ರಣ ಕ್ರಮಗಳಿಗೆ ಒತ್ತು ಕೊಟ್ಟು ಸಮಗ್ರ ಕೀಟ ನಿರ್ವಹಣಾ ಕ್ರಮ ಅನುಸರಿಸುವುದು ಅವಶ್ಯ ಎಂದರು.

ರೈತರು, ಒಂದೇ ತರಹದ ಕೀಟನಾಶಕವನ್ನು ಸಿಂಪರಣೆಯಲ್ಲಿ ಪುನರಾವರ್ತಿಸದೇ 2ನೇ ಸಿಂಪರಣೆಯ ಅವಶ್ಯಕತೆ ಇದ್ದಲ್ಲಿ ಮೊದಲು ಸಿಂಪರಣೆ ಮಾಡಿದ ಕೀಟನಾಶಕ ಬಿಟ್ಟು ಬೇರೆ ಕೀಟನಾಶಕ ಸಿಂಪರಣೆ ಮಾಡುವುದರಿಂದ ಹುಳಗಳ ಸಂತತಿ ಹೆಚ್ಚಾಗದಂತೆ ಮತ್ತು ಕೀಟನಾಶಕಕ್ಕೆ ನಿರೋಧ ಶಕ್ತಿ ಹೆಚ್ಚಿಸದಂತೆ ತಡೆಗಟ್ಟಲು ಸಹಕಾರಿಯಾಗಲಿದೆ. ಇಲ್ಲವಾದಲ್ಲಿ ಹುಳಗಳ ಸಂತತಿ ಹೆಚ್ಚಾಗಿ ಮುಂದಿನ ದಿನಗಳಲ್ಲಿ ಅವುಗಳ ಹತೋಟಿ ಮಾಡುವುದು ಕಷ್ಟ ಸಾಧ್ಯವಾಗುತ್ತದೆ ಎಂದು ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಟಿ.ಜಿ. ಅವಿನಾಶ್ ತಿಳಿಸಿದರು.

ಲದ್ದಿ ಹುಳುವಿನ ನಿಯಂತ್ರಣಕ್ಕೆ ಪ್ರಾರಂಭಿಕ ಹಂತದಲ್ಲಿ ಅಝಾಡಿರಕ್ಟಿನ್ 10,000 ಪಿಪಿಎಂ 2ಮಿ.ಲೀ ನಂತೆ ಸಿಂಪಡಿಸುವುದರಿಂದ ಮೊಟ್ಟೆ ಮತ್ತು ಮೊದಲ ಹಂತದ ಹುಳುಗಳನ್ನು ನಿರ್ವಹಣೆ ಮಾಡಲು ಸಹಕಾರಿಯಾಗುತ್ತದೆ. 

ತುಂತುರು ಮಳೆ ಬರುವ ಹಂತದಲ್ಲಿ ಜೈವಿಕ ಶಿಲೀಂಧ್ರ ನಾಶಕ ನ್ಯೂಮೋರಿಯಾ ರಿಲೇ ಅನ್ನು ಲೀಟರ್‌ಗೆ 5 ಗ್ರಾಂ ನಂತೆ ಸಿಂಪರಣೆ ಮಾಡುವುದರಿಂದ ಲದ್ದಿ ಹುಳುವನ್ನು ಹತೋಟಿ ಮಾಡಬಹುದು.

ಕೀಟ ನಾಶಕಗಳ ಸಿಂಪರಣೆ ಶಿಫಾರಸ್ಸು ಮಾಡಿದ ಪ್ರಮಾಣಕ್ಕಿಂತ ಕಡಿಮೆ ಮತ್ತು ಹೆಚ್ಚು ಉಪಯೋಗಿಸುವುದು ಅಪಾಯಕಾರಿಯಾಗಿದ್ದು, ಇದು ಹುಳುಗಳ ಸಂತತಿಯನ್ನು ಹೆಚ್ಚಿಸಲು ಅನುಕೂಲಕರವಾಗುತ್ತದೆ ಎಂದು ತಿಳಿಸಿದರು.

ಬೆಳೆಯು 2 ವಾರಗಳ ಹಂತದಲ್ಲಿರುವಾಗ ಹುಳುವಿನ ಮೊಟ್ಟೆ ಮತ್ತು ಮರಿ ಹುಳು ನಿಯಂತ್ರಣ ಮಾಡಲು Emamectin Benzoate 1.5% + Profenofos 35% WDG-1.5 ಗ್ರಾಂ/ಲೀಟರ್ ಸಿಂಪರಣೆ ಮಾಡಬಹುದಾಗಿದೆ.ನಂತರದ ದಿನಗಳಲ್ಲಿ ಹುಳುವಿನ ಬಾಧೆ ಕಂಡು ಬಂದಲ್ಲಿ Spinetoram 11.70% Sc-0.5ಮಿ.ಲೀ/ ಲೀಟರ್ ಅಥವಾ Chlorantraniliprole 18.5% SC-0.3 ಮಿ.ಲೀ/  ಲೀಟರ್‍ನಂತೆ ಸಿಂಪರಣೆ ಮಾಡಬಹುದು.

ಸಿಂಪರಣೆ ಮಾಡುವಾಗ ಮೆಕ್ಕೆಜೋಳದ ಸುಳಿಯ ಭಾಗಕ್ಕೆ ತಲುಪುವಂತೆ ಮಾಡುವುದರಿಂದ ಸಮರ್ಪಕವಾಗಿ ಹತೋಟಿ ಮಾಡಬಹುದಾಗಿದೆ ಎಂದು ತಿಳಿಸಿದರು.

error: Content is protected !!