ಪರಿಷತ್‍ನ 96 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜ್ಞಾನಿ ಎಂ.ಜಿ ಬಸವನಗೌಡ
ದಾವಣಗೆರೆ, ಜು.16- ದೇಶದ ಆಹಾರ ಸ್ವಾವಲಂಬನೆಯಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಸಂಶೋಧನಾ ಕೊಡುಗೆಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಅಭಿಪ್ರಾಯಪಟ್ಟರು.
ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ 96 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸುವರ್ಣ ಮಹೋತ್ಸವ ಸಮಾರಂಭದ ಅಂಗವಾಗಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ವಿಸ್ತರಣಾ ತರಬೇತಿಯಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಇಂದು ದೇಶದಲ್ಲಿ 731 ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿವೆ ಹಾಗೂ ರೈತಪರ ವಿಸ್ತರಣಾ ಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸಿ, ರೈತರಿಗೆ ಆರ್ಥಿಕತೆಯ ಸ್ವಾವಲಂಬನೆಯನ್ನು
ನೀಡುವಲ್ಲಿ ಯಶಸ್ಸಿಯಾಗಿವೆ ಎಂದರು.
ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹೆಚ್ಚಾಗುತ್ತಿದ್ದು, ರೈತರಿಗೆ ಅಗತ್ಯವಾಗಿ ಬೇಕಾಗಿರುವ ತಂತ್ರಜ್ಞಾನಗಳು ಮತ್ತು ಇಲಾಖಾ ಯೋಜನೆಗಳ ಬಗ್ಗೆ ಮಾಹಿತಿ ನೀಡುವಲ್ಲಿ ತೋಟಗಾರಿಕೆ ಇಲಾಖೆ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತೋಟಗಾರಿಕೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್, ಕಳೆದ ವರ್ಷ ಬರಗಾಲದಿಂದ ಅಡಿಕೆ ಬೆಳೆಯಲ್ಲಿ ಹೆಚ್ಚು ರೋಗ ಮತ್ತು ಕೀಟಗಳ ಹಾವಳಿಯನ್ನು ಕಂಡಿದ್ದೇವೆ, ಹಾಗೆಯೇ ವಿಸ್ತೀರ್ಣ ಹೆಚ್ಚುತ್ತಿರುವುದರಿಂದ ಅಧಿಕಾರಿಗಳು ಸೂಕ್ತ ಅಂತರ ಬೆಳೆಗಳ ಬಗ್ಗೆ ಮತ್ತು ನಿರ್ವಹಣಾ ಕ್ರಮಗಳ ಬಗ್ಗೆ ಇನ್ನೂ ಹೆಚ್ಚು ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ಕೇಂದ್ರದ ಮುಖ್ಯಸ್ಥ ಡಾ. ದೇವರಾಜ ಟಿ.ಎನ್. ಮಾತನಾಡಿ, ತೋಟಗಾರಿಕೆ ಬೆಳೆಗಳಲ್ಲಿನ ಆರ್ಥಿಕ ಸ್ವಾವಲಂಬನೆಯಿಂದ ಇಂದು ಮಧ್ಯಮ ವರ್ಗದ ರೈತರಲ್ಲಿ ಸಂತಸ ಮೂಡಿದೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೃಷಿ ತಂತ್ರಜ್ಞಾನಗಳನ್ನು ಪ್ರಾತ್ಯಕ್ಷಿಕೆ, ಕ್ಷೇತ್ರ ಪ್ರಯೋಗ ಹಾಗೂ ವೈಜ್ಞಾನಿಕ ಕ್ಷೇತ್ರ ಭೇಟಿಗಳ ಮೂಲಕ ರೈತರಿಗೆ ತಲುಪಿಸುವಲ್ಲಿ ನಮ್ಮ ಕೃಷಿ ವಿಜ್ಞಾನ ಕೇಂದ್ರ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ತೋಟಗಾರಿಕೆ ಬೆಳೆಗಳಲ್ಲಿ ಬರುವ ರೋಗ ಮತ್ತು ಕೀಟಗಳ ನಿರ್ವಹಣೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಡಾ. ಅವಿನಾಶ್ ಟಿ.ಜಿ. ಹಾಗೂ ಹವಾಮಾನ ವೈಪರೀತ್ಯದಲ್ಲಿ ಚೇತರಿಕೆ ಯುಳ್ಳ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ಕೇಂದ್ರದ ಬೇಸಾಯ ತಜ್ಞರಾದ ಮಲ್ಲಿಕಾರ್ಜುನ ಬಿ.ಓ. ಅವರು ಹಂಚಿಕೊಂಡರು.
ತರಬೇತಿಯಲ್ಲಿ ಎಲ್ಲಾ ತಾಲ್ಲೂಕಿನ ತೋಟ ಗಾರಿಕೆ ಅಧಿಕಾರಿಗಳು ಭಾಗವಹಿಸಿ ಮಾಹಿತಿ ಪಡೆದರು.