ಹರಿಹರ ಸರ್ಕಾರಿ ಕಾಲೇಜ್ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ ಹರೀಶ್ ಕಿವಿಮಾತು
ಹರಿಹರ,ಜು.13- ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದು ಶಾಸಕ ಬಿ.ಪಿ ಹರೀಶ್ ಅಭಿಪ್ರಾಯಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್., ಸ್ಕೌಟ್ ಮತ್ತು ಗೈಡ್ ಹಾಗೂ ರೆಡ್ಕ್ರಾಸ್ ಚಟುವಟಿಕೆಗಳ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಜಾಗತಿಕ ಸ್ಪರ್ಧಾತ್ಮಕ ಸಂದರ್ಭದಲ್ಲಿ ಯುವಕರು ಇಂದಿನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮನ್ನು ರೂಪಿಸಿಕೊಳ್ಳಬೇಕು. ಆ ಮೂಲಕ ದೇಶದ ಪ್ರಗತಿಯಲ್ಲಿ ಕೈಜೋಡಿಸಬೇಕು ಎಂದು ತಿಳಿ ಹೇಳಿದರು.
ಧಾರವಾಡದ ಸಾಹಿತಿ ಡಾ.ಸಂಗಮನಾಥ ಲೋಕಾಪುರ ಅವರು ತಮ್ಮ ಸಮಾರೋಪ ಭಾಷಣ ದಲ್ಲಿ, ವಿದ್ಯಾರ್ಥಿಗಳು ಶ್ರದ್ಧೆಯನ್ನು ಮುಖ್ಯವಾಗಿ ಬೆಳೆಸಿ ಕೊಳ್ಳಬೇಕು. ಅಂಕಗಳ ಜೊತೆಯಲ್ಲಿ ಗುರು-ಹಿರಿ ಯರಲ್ಲಿ ಗೌರವ, ಮಾನವೀಯತೆ, ಸಂಸ್ಕಾರ ರೂಢಿಸಿಕೊಳ್ಳಬೇಕು. ಪೋಷಕರ ಒತ್ತಾಸೆಗಳಿಗೆ ಅನುಗುಣವಾಗಿ ಸಾಧನೆಗೈದು ಹುಟ್ಟಿದ ಊರು, ಕಲಿತ ಶಾಲೆ- ಕಾಲೇಜಿಗೆ ಕೀರ್ತಿ ತರುವಂತಹ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸರ್ಕಾರಿ ಕಾಲೇಜುಗಳಿಗೆ ಸರ್ಕಾರ ಉತ್ತಮವಾದ ಸೌಲಭ್ಯಗಳನ್ನು ನೀಡುತ್ತಿದೆ. ಅವುಗಳ ಸದ್ಭಳಕೆ ಮಾಡಿಕೊಂಡು ಶ್ರೇಷ್ಠ ನಾಗರಿ ಕರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರಾಂಶುಪಾಲ ಡಾ.ಹೆಚ್. ವಿರುಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. 2022-23 ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಮಟ್ಟದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬಿ.ಎ ವಿದ್ಯಾರ್ಥಿನಿ ಸುಷ್ಮಾ ಎಂ., ಬಿ.ಕಾಂನ ಅಲಿ ಹಾಗೂ ಬಿ.ಎಸ್ಸಿಯ ಬಿ.ಜಿ ಸಂಗೀತಾ ಇವರಿಗೆ ಶ್ರೀಮತಿ ಸುನಂದಮ್ಮ ಮುನಿಯಪ್ಪ ಅವರು ಕೊಡ ಮಾಡಿರುವ ತಲಾ ಹತ್ತು ಸಾವಿರ ನಗದು ಬಹುಮಾನ ವಿತರಿಸಲಾಯಿತು.
ಈ ಸಮಯದಲ್ಲಿ ಕಾಲೇಜಿಗೆ ಸರಸ್ವತಿ ವಿಗ್ರಹ ವನ್ನು ದಾನವಾಗಿ ನೀಡಿದ ಶ್ರೀಮತಿ ಸುನಂದಮ್ಮ ಮುನಿಯಪ್ಪ ಅವರನ್ನು ಗೌರವಿಸ ಲಾಯಿತು.
ಕಾಲೇಜಿನ ಐ.ಕ್ಯೂ.ಎಸ್.ಸಿ ಸಂಯೋಜಕ ಜಿ.ಎಸ್.ಸುರೇಶ್, ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ. ಎಂ. ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ಚಂದ್ರಶೇಖರ್, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಡಾ.ಬಿ.ಕೆ.ಮಂಜುನಾಥ್, ಯುವ ರೆಡ್ ಕ್ರಾಸ್ನ ಸಂಚಾಲಕ ಡಾ.ಹೆಚ್.ಪಿ.ಅನಂತನಾಗ್, ಸ್ಕೌಟ್ಸ್ ಅಂಡ್ ಗೈಡ್ಸ್ನ ರೇಂಜರ್ಸ್ ವಿಭಾಗದ ಸಂಚಾಲಕರಾದ ಡಾ.ಜಿ.ಎನ್.ದ್ರಾಕ್ಷಾಯಿಣಿ, ಡಾ.ಎಸ್.ಎಂ.ಗೌರಮ್ಮ, ರೋವರ್ಸ್ ಲೀಡರ್ ಮಂಜುನಾಥ ನರಸಗೊಂಡರ್ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿ.ಎ ವಿದ್ಯಾರ್ಥಿನಿ ಕು.ಅರ್ಪಿತಾ ಪ್ರಾರ್ಥಿಸಿ ದರು. ಕು. ದೀಕ್ಷಿತಾ ಮತ್ತು ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೆಚ್.ತಿಪ್ಪೇಸ್ವಾಮಿ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಮತ ಸಾವಕಾರ ಕಾರ್ಯಕ್ರಮ ನಿರ್ವಹಿಸಿದರು, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಾಬು.ಕೆ.ಎ ವಂದಿಸಿದರು.